ಅಥಣಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಚಿವ ಸ್ಥಾನ ಸಿಗಲೆಂದು ನಾನು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಥಣಿ ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಮತ್ತೆ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕಿದೆ. ಇದರಲ್ಲಿ ನಮ್ಮದು ಒಂದು ಸ್ವಾರ್ಥ ಇದೆ. ನಮ್ಮ ಕೆಲಸ ಆಗಬೇಕಾದರೆ ಅವರು ಮಂತ್ರಿ ಆಗಬೇಕು ಎಂದು ತಿಳಿಸಿದರು.
ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ, ಅಂದಾಜು 2,400 ಕೋಟಿ ರೂಪಾಯಿ ಮೊತ್ತದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಹಾಗೂ 600 ಕೋಟಿ ರೂಪಾಯಿ ಮೊತ್ತದ 14 ಗ್ರಾಮದಲ್ಲಿ ಸವಳು - ಜವಳು ಯೋಜನೆ, ಮತ್ತು ಕೆರೆ ತುಂಬುವ ಯೋಜನೆಗೆ ಪ್ರಾರಂಭವಾಗಬೇಕಾದರೆ ರಮೇಶ್ ಜಾರಕಿಹೊಳಿ ಅವರು ಮತ್ತೆ ಜಲಸಂಪನ್ಮೂಲ ಸಚಿವರಾಗಿ ಸಂಪುಟದಲ್ಲಿ ಸ್ಥಾನ ಸಿಗಬೇಕು ಎಂದು ನಾನು ದೇವರಲ್ಲಿ ಪ್ರಾರ್ಥಸುತ್ತೇನೆ ಎಂದರು.
ಅದರೊಂದಿಗೆ ನನಗೆ ಮಂತ್ರಿ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್ ಬಿಟ್ಟ ವಿಚಾರ, ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ನಾನು ನಿಭಾಯಿಸುತ್ತೇನೆ ಎಂದು ಮಹೇಶ್ ಕುಮಟಳ್ಳಿ ಹೇಳಿದರು.