ಬೆಳಗಾವಿ: ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆದ ಬಳಿಕವಷ್ಟೇ ಅವರ ಬಗ್ಗೆ ಮಾತನಾಡುತ್ತೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುತೂಹಲದ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡೋದಿದೆ. ಅವರು ಪಕ್ಷ ಬಿಟ್ಟು ಹೋದ ಮೇಲೆ ಅದನ್ನು ಹೊರ ಹಾಕುವೆ. ಅವರು ಬಿಜೆಪಿಗೆ ಹೋಗುವುದರ ಬಗ್ಗೆ ಗೊತ್ತಿಲ್ಲ. ಅವರ ವಿರುದ್ಧ ಹೈಕಮಾಂಡ್ಗೆ ದೂರು ಕೊಟ್ಟಿರುವುದು ಗೊತ್ತಿಲ್ಲ. ಅವರು ಮೊದಲು ಪಕ್ಷ ಬಿಟ್ಟು ಹೋಗಲಿ. ಆ ಮೇಲೆ ಅವರ ಬಗ್ಗೆ ಮಾತನಾಡುವುದಿದೆ ಎನ್ನುವ ಮೂಲಕ ಬಂಡಾಯ ಶಾಸಕ ರಮೇಶ್ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರವನ್ನು ಸ್ಫೋಟಿಸುವ ಸುಳಿವು ಬಿಟ್ಟುಕೊಟ್ರು. ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಿ, ಆ ಸಂದರ್ಭ ಇನ್ನೂ ಬಂದಿಲ್ಲ. ಆದರೆ, ಕಡಲ ಮಂಥನವಾದಾಗ ಅಮೃತವೂ ಬರುತ್ತೆ ವಿಷಾವೂ ಬರುತ್ತೆ. ಎರಡನ್ನೂ ಸೇವಿಸಲು ತಯಾರಿರಬೇಕು ಎಂದರು.
ಮುಂದುವರೆದು ಮಾತನಾಡಿದ ಶಾಸಕಿ ಲಕ್ಷ್ಮಿ, ಗೋಕಾಕ್ಗೆ ಲಖನ್ ಜಾರಕಿಹೊಳಿ ಅವರನ್ನು ಉತ್ತರಾಧಿಕಾರಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಇಂತಹ ವಿಚಾರಗಳು ಅತೀ ಸೂಕ್ಷ್ಮ. ನಮ್ಮ ರಾಜ್ಯನಾಯಕರು ಮತ್ತು ಹೈಕಮಾಂಡ್ ನಾಯಕತ್ವ ನಿರ್ಧಾರ ಮಾಡುತ್ತೆ. ನಮ್ಮ ಅನಿಸಿಕೆ ಮೇಲೆ ಅವಲಂಬನೆ ಇರುವುದಿಲ್ಲ. ಎಲ್ಲರನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಸಾಧಕ-ಬಾಧಕಗಳ ಬಗ್ಗೆ ವಿಚಾರ ಮಾಡುತ್ತಾರೆ. ಅಷ್ಟು ಸುಲಭವಾಗಿ ಕಾಂಗ್ರೆಸ್ ಪಕ್ಷವನ್ನು ಯಾರೂ ರೈಡ್ ಮಾಡಲು ಆಗಲ್ಲ. ಒಂದು ವೇಳೆ ಅಂತಹ ಸಾಹಸಕ್ಕೆ ಕೈ ಹಾಕಿದ್ರು ಅದು ಮೂರ್ಖತನದ ಪರಮಾವಧಿ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಬೇಕೊ ಅದನ್ನ ಮಾಡುತ್ತೆ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.