ಚಿಕ್ಕೋಡಿ(ಬೆಳಗಾವಿ): ಅಥಣಿಯನ್ನು ನೂತನ ಜಿಲ್ಲೆಯನ್ನಾಗಿ ಮಾಡಿ ಆರು ತಾಲೂಕುಗಳನ್ನು ಸೇರಿಸಬೇಕು ಎಂಬ ವಿಚಾರದ ಕುರಿತು ನಾನು ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಜಿಲ್ಲಾ ಹೋರಾಟಗಾರ ಸಮಿತಿ ಅಥಣಿ ಬಂದ್ಗೆ ಕರೆ ನೀಡಿರುವ ಹಿನ್ನೆಲೆ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಈಗಾಗಲೇ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಇವತ್ತು ಉತ್ತರ ಕರ್ನಾಟಕ ಸಮಸ್ಯೆ ಕುರಿತು ಚರ್ಚೆ ನಡೆಯಲಿದೆ. ಅಥಣಿ ಜಿಲ್ಲೆ ರಚನೆ ಬೇಡಿಕೆಯ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸುತ್ತೇನೆ ಮತ್ತು ಸದನದಲ್ಲಿ ಈ ಕುರಿತು ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬೆಳಗಾವಿ ಎರಡನೇ ರಾಜಧಾನಿ ಎಂದು ಸರ್ಕಾರದ ಭಾವನೆ ಇರುವುದರಿಂದ ಎರಡನೇ ರಾಜಧಾನಿಗೆ ಕೊರತೆ ಆಗಬಾರದು. ಅಥಣಿ, ಕಾಗವಾಡ ರಾಯಬಾಗ್, ಕುಡಚಿ ಪಕ್ಕದ ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಜಮಖಂಡಿ ತಾಲೂಕಿನ ಕೆಲವು ಹಳ್ಳಿಗಳಿಗೆ ಅಥಣಿ ಮಧ್ಯದಲ್ಲಿ ಇರುವುದರಿಂದ ಜಿಲ್ಲೆ ರಚನೆಗೆ ಅಥಣಿ ಯೋಗ್ಯವಾಗಿದೆ. ಅಥಣಿ ಸುತ್ತಮುತ್ತಲಿನ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಅಥಣಿ ಜಿಲ್ಲೆ ರಚನೆ ವಿಚಾರವನ್ನು ನಾನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ನಾವು ಗಡಿಭಾಗದಲ್ಲಿ ಇರುವುದರಿಂದ ಬಾಗಲಕೋಟೆ ಜಿಲ್ಲೆಯ ಎರಡು ಕ್ಷೇತ್ರಗಳನ್ನು ಒಳಗೊಂಡ ಅಥಣಿ ಪ್ರತ್ಯೇಕ ಜಿಲ್ಲೆ ರಚನೆ ಮಾಡಬೇಕು. ಆಡಳಿತ ಯಂತ್ರ ಸುಧಾರಣೆಗೆ ಅಥಣಿ ನೂತನ ಜಿಲ್ಲೆ ರಚನೆಯಾಗಬೇಕು ಎಂಬ ಈ ಭಾಗದ ಜನರ ಕೂಗಿಗೆ ನಾನು ಬೆಂಬಲ ಕೊಡುತ್ತೇನೆ. ಅಥಣಿ ಜಿಲ್ಲೆ ರಚನೆಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ. ಬೆಳಗಾವಿ ಜಿಲ್ಲೆಯಲ್ಲಿ ಕೊನೆಯ ತಾಲೂಕು ಅಥಣಿ ತಾಲೂಕು ಇರುವುದರಿಂದ ಆಡಳಿತ ಇನ್ನಷ್ಟು ಜನರ ಸಮೀಪ ತರುವುದಕ್ಕೆ ಅಥಣಿ ಜಿಲ್ಲೆ ಆಗಬೇಕು ಎಂದರು.
ಅಥಣಿ ಸುತ್ತಮುತ್ತಲಿನ ತಾಲೂಕುಗಳ ಶಾಸಕರು ಬೆಂಬಲ ಸೂಚಿಸಿದ್ದಾರೆ. ಅಥಣಿ ಜಿಲ್ಲಾ ಕೇಂದ್ರಕ್ಕೆ ಶಾಸಕರು ಕೂಡ ಸದನದಲ್ಲಿ ಧ್ವನಿ ಎತ್ತುತ್ತಾರೆ. ಈ ಭಾಗದ ಜನರ ಭಾವನೆ ಏನು ಎಂಬುದನ್ನು ಸಿಎಂ ಅವರನ್ನು ಖುದ್ದಾಗಿ ಭೇಟಿ ತಿಳಿಸುತ್ತೇನೆ. ಜಿಲ್ಲೆಯ ರಚನೆಯಲ್ಲಿ ಯಾವುದೇ ರಾಜಕೀಯ ಹೋರಾಟಗಳು ನಡೆಯುತ್ತಿಲ್ಲ. ಗೋಕಾಕ್ ಅಥವಾ ಚಿಕ್ಕೋಡಿ ಜಿಲ್ಲೆಯಾದರೆ ನನ್ನ ತಕರಾರು ಏನು ಇಲ್ಲಾ. ಅಥಣಿ ಜಿಲ್ಲೆಯಾಗಬೇಕು ಎಂಬುದು ಇಲ್ಲಿನ ಜನರ ಆಗ್ರಹ ಎಂದು ಹೇಳಿದರು.
ಇದನ್ನೂ ಓದಿ: 2ಎ ಮೀಸಲಾತಿ ವಿಚಾರ: ಸಿಎಂ ನಡೆಗೆ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ