ಬೆಳಗಾವಿ: ಉತ್ತರಕರ್ನಾಟಕ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಲಿಂಗಾಯತ ಸಮಾಜ ಕಾಂಗ್ರೆಸ್ ಜೊತೆಗೆ ಬರುವ ರೀತಿಯಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷ ಬಸವಾದಿ ಶರಣರ ತತ್ವಗಳ ಅಡಿಪಾಯದ ಮೇಲೆ ಜಾತ್ಯಾತೀತ ತತ್ವದ ಮೇಲೆ ನಡೆಯುತ್ತಿದೆ. ಎಲ್ಲಾ ಸಮಾಜದವರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗಬೇಕು ಎಂಬ ಆಸೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಕೂಡ ಕಾಂಗ್ರೆಸ್ ಪಕ್ಷದ ಜೊತೆಗೆ ನಿಲ್ಲುವಂತೆ ಪ್ರಯತ್ನ ಮಾಡಲಾಗುವುದು ಎಂದರು.
ಕಾಂಗ್ರೆಸ್‍ನಲ್ಲಿ ಲಿಂಗಾಯತರಿಗೆ ಮುಂದಿನ ಸಿಎಂ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಚುನಾವಣೆಯಾಗಬೇಕು. ಚುನಾವಣೆಯಲ್ಲಿ 124 ಶಾಸಕರು ಗೆದ್ದು ಬರಬೇಕು. ಆ ಮೇಲೆ ಶಾಸಕರು ಸಿಎಲ್‍ಪಿ ನಾಯಕರನ್ನು ಹೈಕಮಾಂಡ್ ಜೊತೆಗೂಡಿ ಸಿಎಂ ನಿರ್ಧಾರ ಮಾಡುತ್ತಾರೆ. ಇಷ್ಟು ಬೇಗ ಅದರ ಬಗ್ಗೆ ಚರ್ಚೆ ಮಾಡುವುದು ಉಚಿತವಲ್ಲ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.
ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‍ನಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವಾಗ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆಯೋ ಆ ಸಂದರ್ಭದಲ್ಲಿ ಬರೀ ಲಿಂಗಾಯತರು ಅಷ್ಟೇ ಅಲ್ಲ ಪ್ರತಿಯೊಂದು ಸಮಾಜದ ಧ್ವನಿಯಾಗಿ ಕೆಲಸ ಮಾಡಿದೆ. ಹೀಗಾಗಿ ಲಿಂಗಾಯತ ಸಮಾಜಕ್ಕೆ ಅನ್ಯಾಯ ಆಗಿದೆ ಎಂಬ ಕೂಗು ನಮಗಂತೂ ಕೇಳಿಸುತ್ತಿಲ್ಲ, ಕಾಣಿಸಿಲ್ಲ ಎಂದರು.
ಎಂ.ಬಿ ಪಾಟೀಲ್, ಈಶ್ವರ ಖಂಡ್ರೆ ಹಾಗು ನನ್ನನ್ನೂ ಸೇರಿ ಮುಂತಾದ ಮುಖಂಡರನ್ನು ಗುರುತಿಸುವ ಕೆಲಸ ನಮ್ಮ ಪಕ್ಷ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಜಾಸ್ತಿ ಜವಾಬ್ದಾರಿ ನೀಡುವ ಕೆಲಸ ಮಾಡುತ್ತದೆ ಎಂದರು.
ಇದನ್ನೂ ಓದಿ: ಬಿಎಸ್‌ವೈ ಬೆಂಬಲಿತ ಬಿಜೆಪಿ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವುದು ನಿಶ್ಚಿತ: ಎಂ.ಬಿ ಪಾಟೀಲ್