ಬೆಳಗಾವಿ: ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಮಹಾಮಳೆಗೆ ಸಿಲುಕಿ ನಲುಗಿವೆ. ಇಷ್ಟಾದರೂ ರಾಜ್ಯ ಬಿಜೆಪಿ ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸದೇ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ವಿಚಾರಕ್ಕೆ ಉತ್ತರಿಸಿದ ಅವರು, ಅಧಿಕಾರದಲ್ಲಿದ್ದವರಿಗೆ ಕಣ್ಣು ಕಾಣಿಸಲ್ಲ, ಕಿವಿಯೂ ಕೇಳಸಲ್ಲ. ಚಿಕ್ಕ ಮಕ್ಕಳು ಬಿಸ್ಕತ್ಗಾಗಿಯೂ ಪರದಾಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಒಂದೂವರೆ ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿಯೂ ಅಪಾರ ಪ್ರಮಾಣದಲ್ಲಿ ಹಾನಿ ಆಯ್ತು. ಸಚಿವರು ಬರ್ತಾರೆ, ಕಣ್ಣೊರೆಸುವ ತಂತ್ರ ಮಾಡ್ತಾರೆ. ಘೋಷಣೆ ಮಾಡ್ತಾರೆ, ಹೋಗ್ತಾರೆ. ಆದ್ರೆ, ಜಿಲ್ಲೆಯಲ್ಲಿ 14 ಸಾವಿರ ಕೋಟಿ ಹಾನಿಯಾಗಿದೆ ಅಂತಾ ಡಿಸಿ ವರದಿ ಕೊಟ್ಟಿದ್ದಾರೆ. ಆದ್ರೆ ಈವರೆಗೆ 2 ಸಾವಿರ ಕೋಟಿ ರೂಪಾಯಿ ಸಹ ಹಣ ಬಂದಿಲ್ಲ. ಮನೆ ಬಿದ್ದವರಿಗೆ ಮನೆಗಳನ್ನು ಸಹ ಕೊಟ್ಟಿಲ್ಲ. ನೆರೆ ಸಂತ್ರಸ್ತರ ಪರ ಧ್ವನಿ ಎತ್ತುವುದರಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿಲ್ಲ ಎಂದ್ರು.
ನೇಕಾರರ ಸಮಸ್ಯೆಗೆ ಸಿದ್ದರಾಮಯ್ಯ, ಡಿಕೆಶಿ, ಸತೀಶ್ ಜಾರಕಿಹೊಳಿ, ನಾವು ಸಿಎಂ ಭೇಟಿಯಾಗಿ ಮನವಿ ಕೊಟ್ಟಿದ್ದೇವೆ. ನನ್ನ ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ಸಾಕಷ್ಟು ನೇಕಾರರಿದ್ದಾರೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಪ್ಯಾಕೇಜ್ ಘೋಷಿಸಿದ್ದರಲ್ಲಿ ಕರ್ನಾಟಕಕ್ಕೆ ಏನು ಬಂತು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬರೀ ಬರೋದು ಡಿಸಿ ಆಫೀಸ್‌ನಲ್ಲಿ ಕುಳಿತು ಮೀಟಿಂಗ್ ಮಾಡಿದ್ರೆ ಪರಿಹಾರ ಆಗಲ್ಲ. ಮೀಟಿಂಗ್ ಮಾಡಿದ್ರೆ ಅದು ಕಾರ್ಯಗತವಾಗಬೇಕೆಂದು ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಟಾಂಗ್ ನೀಡಿದರು. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಸಹೋದರನ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ನಮಗೆ ಮಾಡಲು ಬೇರೆ ಬೇರೆ ಕೆಲಸಗಳು ಬಹಳ ಇವೆ. ಹೀಗಾಗಿ ಈ ಬಾರಿ ಡಿಸಿಸಿ ಬ್ಯಾಂಕ್ ನ ಚುನಾವಣೆಯಲ್ಲಿ ಸ್ಪರ್ಧಿಸಲ್ಲವೆಂದು ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಅನುದಾನ ಕಡಿತ:
ರಾಜ್ಯದಲ್ಲಿ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್, ಜೆಡಿಎಸ್ ಶಾಸಕರಿರುವ ಕ್ಷೇತ್ರದಲ್ಲಿ ಅನುದಾನ ಕಡಿತ ಮಾಡಲಾಗುತ್ತಿದೆ. ಎಂಎಲ್ಎ ಫಂಡ್ ಕೂಡ ನೀಡುತ್ತಿಲ್ಲ. ಜನರ ಎದುರು ಹೋಗಲು ನಮಗೆ ಕಷ್ಟವಾಗುತ್ತಿದೆ. ನಮ್ಮ ಕ್ಷೇತ್ರಕ್ಕೆ ಅನುದಾನದ ಕೊರತೆ ಮಾಡಿಲ್ಲ ಅಂತಾ ಹೇಳೋಕೆ ಸಾಧ್ಯವಿಲ್ಲ. ಅಂಗನವಾಡಿ, ಶಾಲೆಗಳು ಬಿದ್ದಿವೆ. ರಸ್ತೆಗಳು ಕೆಟ್ಟಿವೆ. ಕಾಮಗಾರಿ ಕುಂಠಿತವಾಗಿವೆ. ನಾನು ಕೇಳಿದ್ದಕ್ಕೆ ಸಿಎಂ ಬಿಎಸ್‌ವೈ, ಕೆಲ ಸಚಿವರು ಸಹಾಯ ಮಾಡ್ತಿದಾರೆ. ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಇದು ರಾಜಕಾರಣ. ಇದನ್ನೆಲ್ಲಾ ಸಹಿಸಿಕೊಂಡು ಫೈಟ್ ಮಾಡಿಕೊಂಡು ಮುಂದೆ ಹೋಗಬೇಕಷ್ಟೇ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆದರು.
ಆರ್.ಆರ್. ನಗರದಲ್ಲಿ ಬಿಜೆಪಿಗೆ ಸೋಲಿನ ಭಯ:
ಆರ್.ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಹೆಬ್ಬಾಳ್ಕರ್ ಅವರು, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲುವ ಭಯ ಎದುರಾಗಿದೆ. ಸ್ಪರ್ಧೆಗಿಳಿದಿರುವ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯ ಧ್ವನಿ ಅಡಗಿಸಲು ಕೇಸ್ ದಾಖಲಿಸಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.
ಆರ್.ಆರ್.ನಗರ ಕ್ಷೇತ್ರದಲ್ಲಿ ವಾತಾವರಣ ಚೆನ್ನಾಗಿದೆ. ಜನರು ಎಲ್ಲವನ್ನೂ ಗಮನಿಸಿದ್ದಾರೆ. ಹೀಗಾಗಿ ಬಿಜೆಪಿಯವರಿಗೆ ಸೋಲ್ತೀವಿ ಅಂತಾ ಭಯ ಶುರುವಾಗಿದೆ. ಅದಕ್ಕೆ ಕೇಸ್ ದಾಖಲಿಸಿ ಬೆದರಿಸುವ ತಂತ್ರ ಮಾಡುತ್ತಿದ್ದಾರೆ ಎಂದು ರಾಜ್ಯಸರ್ಕಾರದ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದವರು ಯಾವ ಅಭ್ಯರ್ಥಿಯನ್ನು ನಿರ್ಲಕ್ಷ್ಯ ಮಾಡಲ್ಲ ಎಂದ್ರು.
ಆರ್.ಆರ್.ನಗರದಲ್ಲಿ ಬಿಜೆಪಿ ಪರ ಯಶ್, ದರ್ಶನ್ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಜೋಡೆತ್ತುಗಳು ನಿಂತುಕೊಳ್ಳಲಿ, ಎಲ್ಲರೂ ಬರಲಿ, ನಮಗೆ ಅಭ್ಯರ್ಥಿ ಗೆಲ್ಲಬೇಕು. ಜನರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ನಮ್ಮ ನಾಯಕರು ಮಾಡುತ್ತಿದ್ದಾರೆ. ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಹೈಕಮಾಂಡ್ ಉತ್ತರ ಕೊಡುತ್ತೆ. ಅದರ ಬಗ್ಗೆ ಉತ್ತರ ಕೊಡೋದು ಈಗ ಸಮಂಜಸವಲ್ಲ ಎಂದರು.
ಡಿಸಿಎಂ ಕಾರಜೋಳ ದುಃಖಕ್ಕೆ ಸ್ಪಂದಿಸುತ್ತೇವೆ:
ಡಿಸಿಎಂ ಗೋವಿಂದ ಕಾರಜೋಳ ವಯಸ್ಸಾದವರು, ಹೀಗಾಗಿ ಪ್ರತಿಯೊಂದರಲ್ಲಿಯೂ ದುರ್ಬೀನು ಹಚ್ಚಿ ನೋಡುವಂತ ರಾಜಕಾರಣಿ ನಾನಲ್ಲ. ಅವರಿಗೆ ವಯಸ್ಸಾಗಿದೆ ಎಂದು ತಮ್ಮ ಅಸಹಾಯಕತೆಯನ್ನ ಮಾಧ್ಯಮದ ಎದುರು ಹೇಳಿಕೊಂಡಿದ್ದಾರೆ. ಆದ್ರೆ, ಅವರ ತರುವಾಯ ಪಕ್ಷದಲ್ಲಿ ಸಾಕಷ್ಟು ಜನ ಜವಾಬ್ದಾರಿ ಸಚಿವರಿದ್ದಾರೆ. ಅವರು ಬಂದು ನೋಡಲಿ ಎಂಬ ಒಂದೇ ಅಭಿಪ್ರಾಯ ನಮ್ಮದಾಗಿದ್ದು, ಕಾರಜೋಳ ಅವರ ದುಃಖದ ಜತೆಗೆ ನಾವಿದ್ದೀವಿ ಎನ್ನುವ ಮೂಲಕ ಶಾಸಕಿ ಲಕ್ಷೀ ಹೆಬ್ಬಾಳ್ಕರ್ ಕಾರಜೋಳ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು.
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುಸಜ್ಜಿತ, ಹೈಜೆನಿಕ್ ಕ್ಯಾಂಟೀನ್ ಉದ್ಘಾಟನೆ ಮಾಡ್ತಿದ್ದೇವೆ. ಹಸಿದವರಿಗೆ ಊಟ ಕೊಡುವುದು ಕಾಂಗ್ರೆಸ್ ಕಾನ್ಸೆಪ್ಟ್. ಕಾರ್ಯಕರ್ತರಿಗೆ ಮಾತ್ರ ಕ್ಯಾಂಟೀನ್ ಅಲ್ಲ, ಎಲ್ಲ ಸಾರ್ವಜನಿಕರಿಗೂ ಅನುಕೂಲ ಆಗುತ್ತೆ. ಆದ್ರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷದ ಸುಮಾರು ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ. ಮುಂಬರುವ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ. ಆಗ ಬಡವರ ಅನುಕೂಲಕ್ಕೆ ಕ್ರಮ ಕೈಗೊಳ್ತೇವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಹೇಳಿದ್ರು.