ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮವು ಜುಲೈ 2 ರಂದು ನಡೆಯಲಿದೆ. ಈ ಹಿನ್ನೆಲೆ, ರಾಜ್ಯದ 7,800 ಗ್ರಾಮ ಪಂಚಾಯತಿ, ನಗರ ವಾರ್ಡ್‍ಗಳಲ್ಲಿ ಟಿವಿ ಸ್ಕ್ರೀನ್ ಮೂಲಕ ಲೈವ್ ವೀಕ್ಷಣೆ ವ್ಯವಸ್ಥೆ ಮಾಡಲಾಗಿದ್ದು, ಏಕಕಾಲಕ್ಕೆ 10 ಲಕ್ಷ ಕಾರ್ಯಕರ್ತರು ರಾಷ್ಟಗೀತೆ ಹಾಡುವ ಮೂಲಕ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನೂತನವಾಗಿ ಡಿಜಿಟಲ್ ಮಾಧ್ಯಮದ ಮೂಲಕ ಪ್ರತಿಯೊಂದು ಹಳ್ಳಿಯಲ್ಲಿ ಪಕ್ಷ ಸಂಘಟನೆ ಮಾಡಲು ಶುರು ಮಾಡುವ ನಿಟ್ಟಿನಲ್ಲಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಡಿ.ಕೆ.ಶಿ ಅವರ ಪದಗ್ರಹಣ ಕಾರ್ಯಕ್ರಮವು, ಇಡೀ ದೇಶದಲ್ಲಿಯೇ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಆ ಕಾರ್ಯಕ್ರಮಕ್ಕೆ ಅಂದಾಜು 10 ಲಕ್ಷ ಕಾರ್ಯಕರ್ತರು ಏಕಕಾಲಕ್ಕೆ ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಜ್ಞಾವಿಧಿ ಕೈಗೊಳ್ಳಲಿದ್ದಾರೆ. ಜೊತೆಗೆ ಬೇರು ಮಟ್ಟದಿಂದ ಪಕ್ಷ ಬಲಪಡಿಸಲು ಉತ್ತೇಜಿಸುವ ಕಾರ್ಯಕ್ರಮವೂ ಇದಾಗಿದೆ ಎಂದರು. ಬೆಳಗಾವಿ ಜಿಲ್ಲೆಯ 550 ಕಡೆ ಈ ವಿನೂತನ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಎಲ್ಲ ಜನತೆಯ ಆಶೀರ್ವಾದ ಕಾಂಗ್ರೆಸ್ ಪಕ್ಷದ ಮೇಲಿರಲಿ ಎಂದರು.
ಇದನ್ನು ಓದಿ: ಡಿಕೆಶಿ ಪದಗ್ರಹಣ ರಾಜ್ಯ ರಾಜಕೀಯದಲ್ಲೇ ಐತಿಹಾಸಿಕವಾಗಲಿದೆ.. ಸತೀಶ್ ಜಾರಕಿಹೊಳಿ
ಪದಗ್ರಹಣ ಸಮಾರಂಭ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರು ನಾಯಕರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸುವ ಮೂಲಕ ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ನಲ್ಲಿರುವ ಭಿನ್ನಾಭಿಪ್ರಾಯಗಳ ಜೊತೆಗೆ ಪಕ್ಷದಲ್ಲಿ ಕ್ರೆಡಿಟ್ ವಾರ್ ಕೂಡ ನಡೆಯುತ್ತಿದೆಯೇ ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ.
ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದರು. ಇಂದು ಅದೇ ವಿಚಾರವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಜಿಲ್ಲೆಯಲ್ಲಿಯೇ ಈ ಇಬ್ಬರು ಕಾಂಗ್ರೆಸ್ ನಾಯಕರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ, ಕ್ರೆಡಿಟ್ ವಾರ್ ಇರುವುದನ್ನು ಬಹಿರಂಗಪಡಿಸಿದಂತಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೆಬ್ಬಾಳ್ಕರ್, ಸುದ್ದಿಗೋಷ್ಠಿ ನಡೆಸುವ ಜವಾಬ್ದಾರಿಯನ್ನು ಎಲ್ಲರಿಗೂ ಕೊಟ್ಟಿದ್ದಾರೆ. ಅವ್ರ ಜೊತೆಗೆ ಬರಲು ನಂದೇನು ತಕರಾರಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವ ವೈಮನಸ್ಸು ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಕ್ರೆಡಿಟ್ ವಾರ್ ನಡಿಯುತ್ತಿದೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಇಂದು ಎಲ್ಲಾ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ. ಅದೇ ರೀತಿ ನಾನು ಸುದ್ದಿಗೋಷ್ಠಿ ನಡೆಸುತ್ತಿರುವೆ. ಹಾಗಂತ ಭಿನ್ನಾಭಿಪ್ರಾಯ ಇದೇ ಎಂಬುದು ಶುದ್ಧ ಸುಳ್ಳು ಎಂದರು.