ಬೆಳಗಾವಿ: ಮಾಜಿ ಸಚಿವ ಡಿಕೆಶಿ ಅವರ ಅಕೌಂಟಿನಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಸಿದಂತೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಡಿ ಎರಡನೇ ನೋಟಿಸ್ ಜಾರಿಗೊಳಿಸಿದೆ.
ಇಡಿ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದು, ನಾಳೆ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಡಿಕೆಶಿ ಅಕೌಂಟ್ನಿಂದ ಹೆಬ್ಬಾಳ್ಕರ್ ಖಾತೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.14 ರಂದೇ ಇಡಿ ನೋಟಿಸ್ ಜಾರಿಗೊಳಿಸಿತ್ತು. ವಿಚಾರಣೆಗೆ ಮತ್ತೊಂದು ದಿನ ನೀಡುವಂತೆ ಹೆಬ್ಬಾಳ್ಕರ್ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸೆ. 19ಕ್ಕೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿದೆ.
ಡಿಕೆಶಿ ಜೊತೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಹೋದರ ಚೆನ್ನರಾಜ್ ಹಟ್ಟಿಹೊಳಿ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಡಿಕೆಶಿ ಹೆಬ್ಬಾಳ್ಕರ್ ಕುಟುಂಬಕ್ಕೆ ಅಕ್ರಮ ಹಣ ವರ್ಗಾವಣೆ ಮಾಡಿರುವ ದಾಖಲೆಗಳು ಇಡಿಗೆ ದೊರೆತ್ತಿವೆ ಎನ್ನಲಾಗಿದೆ. ಹಾಗಾಗಿ ಹೆಬ್ಬಾಳ್ಕರ್ ಸೇರಿ 184 ಜನರಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ.