ಬೆಳಗಾವಿ: ಉತ್ತರ ಪ್ರದೇಶದ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆಗೈದ ಕಾಮುಕರನ್ನು ಕಂಡಕಂಡಲ್ಲಿ ಗುಂಡಿಕ್ಕಬೇಕು ಎಂದು ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.
ಈ ಸಂಬಂಧ ವಿಡಿಯೋ ಮಾಡಿ ಫೇಸ್ಬುಕ್ ಪೇಜ್ನಲ್ಲಿ ಹಾಕಿರುವ ಹೆಬ್ಬಾಳ್ಕರ್ ಅವರು, ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ಅಮಾನವೀಯ. ಕುಟುಂಬಸ್ಥರಿಗೆ ಮುಖವನ್ನೂ ತೋರಿಸದೆ ರಾತ್ರೋರಾತ್ರಿ ಸುಟ್ಟು ಹಾಕುವ ಮೂಲಕ ಯುಪಿ ಪೊಲೀಸರು ಅಮಾನವೀಯ ಕೃತ್ಯ ಎಸಗಿದ್ದಾರೆ. ದಲಿತ ಮಹಿಳೆ ಎಂಬ ಕಾರಣಕ್ಕೆ ಯುಪಿ ಸರ್ಕಾರ ಈ ರೀತಿ ನಡೆಸಿಕೊಂಡ್ರಾ ಎಂಬ ಅನುಮಾನ ಮೂಡತೊಡಗಿದೆ. ಘಟನೆ ನಡೆದ ಎಂಟು ದಿನಕ್ಕೆ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ. ಯುವತಿ ಮೃತಪಟ್ಟ ಬಳಿಕ ಎಂಟು ನಿಮಿಷವೂ ಯುವತಿಯ ಶವವನ್ನು ಯುಪಿ ಪೊಲೀಸರು ಇಡಲಿಲ್ಲ. ಪೊಲೀಸರೇ ನಿಮಗೆ ಮನುಷ್ಯತ್ವ ಇದೆಯಾ? ಎಂದು ಯುಪಿ ಪೊಲೀಸರ ವಿರುದ್ಧ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರವಾದಾಗ ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ಸರ್ಕಾರ ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕಳುಹಿಸಿಕೊಟ್ಟಿತ್ತು. ನಿರ್ಭಯಾ ಮೃತಪಟ್ಟಾಗ ಗೌರವದಿಂದ ಅಂತ್ಯಕ್ರಿಯೆ ನಡೆಸಲಾಗಿತ್ತು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಓರ್ವ ಸಂತರು. ಅವರ ಬಗ್ಗೆ ಯುವ ಸಮೂಹ ಒಳ್ಳೆಯ ಅಭಿಪ್ರಾಯ ಹೊಂದಿದ್ದೆ. ಆದರೆ ಅವರು ಯುಪಿಯಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ ಸರಿಯಿದೆಯಾ ? ಎಂದು ಪ್ರಶ್ನಿಸಿದರು.
ಯುವತಿಯ ಅಂತ್ಯಸಂಸ್ಕಾರದ ವೇಳೆ ಪೊಲೀಸರು ನಗ್ತಾ ಇದ್ದರು. ರಾಮರಾಜ್ಯದಲ್ಲಿ ಇಂಥ ಘಟನೆ ಶೋಭೆ ತರುತ್ತಾ. ಹೈದರಾಬಾದ್ನಲ್ಲಿ ನಡೆದ ವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಲ್ಲಿನ ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದರು. ಇಲ್ಲಿಯೂ ಆರೋಪಿಗಳಿಗೆ ಕಂಡಿಲ್ಲಿ ಗುಂಡು ಹಾಕಬೇಕು, ಗಲ್ಲಿಗೇರಿಸಬೇಕು ಎಂದು ನಾವೆಲ್ಲ ಒತ್ತಾಯ ಮಾಡಬೇಕಿದೆ ಎಂದು ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.