ಬೆಳಗಾವಿ: ನನ್ನನ್ನೂ ಸೇರಿದಂತೆ ರಾಜ್ಯದ ಸುಮಾರು 50 ಮುಖಂಡರು ಮತ್ತು ಅವರ ಸಂಬಂಧಿಕರ ಮೇಲೆ ಲೋಕಾಯುಕ್ತ ದಾಳಿ ಮಾಡಿಸಲು ಬಿಜೆಪಿ ಸರ್ಕಾರ ಸಂಚು ರೂಪಿಸಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಇಂದು ಬೆಳಗ್ಗೆ ತುರ್ತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು "ಚುನಾವಣೆಗೆ ಕೇವಲ 10 ದಿನ ಬಾಕಿ ಉಳಿದಿದ್ದು, ನಮಗೆ ಈಗ ಪ್ರತಿ ಕ್ಷಣವೂ ಮುಖ್ಯ. ಆದರೆ ಈ ಸಂದರ್ಭದಲ್ಲಿ ನಾವು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಾಗದಂತೆ ಕಟ್ಟಿ ಹಾಕುವ ಸಂಚು ರೂಪಿಸಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ರಾಜ್ಯದಲ್ಲಿ ಒಟ್ಟು 50 ಮಂದಿ ಮುಖಂಡರ ಮೇಲೆ ಇನ್ನು ಒಂದೆರಡು ದಿನದಲ್ಲಿ ದಾಳಿ ನಡೆಸುವ ಬಗ್ಗೆ ಮಾಹಿತಿ ಬಂದಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನನ್ನನ್ನೂ ಸೇರಿ ಒಟ್ಟು ಮೂವರು ಕಾಂಗ್ರೆಸ್ ಮುಖಂಡರ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ ಎಂದು ತಿಳಿದು ಬಂದಿದೆ ಎಂದರು.
ಜಿಲ್ಲೆಯ ಇನ್ನಿಬ್ಬರು ಮುಖಂಡರು ಯಾರು? ಎಂಬ ಮಾಧ್ಯಮಗಳ ಪ್ರಶ್ನೆಗೆ ಯಾರ ಮೇಲೆ ಪ್ರೀತಿ ಜಾಸ್ತಿಯಿದೆಯೋ ಅಂತಹ ಜಿಲ್ಲೆಯ ಮೂವರನ್ನು ಟಾರ್ಗೆಟ್ ಮಾಡಿದ್ದಾರೆ. ಇನ್ನಿಬ್ಬರು ಯಾರು ಅನ್ನೋದು ಮಾಧ್ಯಮದವರು ತುಂಬಾ ಸ್ಮಾರ್ಟ್ ಇದ್ದು, ನಿಮಗೆ ಗೊತ್ತಾಗುತ್ತೆ ಎಂದು ಹೇಳಿದರು.
ವಾಮ ಮಾರ್ಗ ಹಿಡಿಯುವುದು ಸರಿಯಲ್ಲ: ಅಭಿವೃದ್ಧಿ ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುವ ಮೂಲಕ ಚುನಾವಣೆಯಲ್ಲಿ ಹೋರಾಡಬೇಕೇ ವಿನಃ ಈ ರೀತಿ ವಾಮ ಮಾರ್ಗ ಹಿಡಿಯುವುದು ಸರಿಯಲ್ಲ. ಈ ರೀತಿ ಬೆದರಿಕೆಯ ತಂತ್ರ ಅನುಸರಿಸಿದರೆ ಅದು ಅವರಿಗೇ ಮುಳುವಾಗುತ್ತದೆ ಎಂದು ಹೆಬ್ಬಾಳ್ಕರ್ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು. ನಾನು ಒಬ್ಬ ರಾಜ್ಯದ ಕಾಂಗ್ರೆಸ್ ವಕ್ತಾರೆ. ಸುಮಾರು 50 ಜನರಲ್ಲಿ ನನ್ನ ಮೇಲೂ ದಾಳಿ ಮಾಡುವ ಮಾಹಿತಿ ಇದೆ. ನನ್ನ ಸೋಲಿಸುವುದು, ಗೆಲ್ಲಿಸುವುದು ಗ್ರಾಮೀಣ ಮತ ಕ್ಷೇತ್ರದ ಜನ. ಆದರೆ ಕಾರ್ಯಕರ್ತರು ಗೊಂದಲಕ್ಕೀಡಾಗುತ್ತಾರೆ ಅಷ್ಟೆ. ನನ್ನ ಕ್ಷೇತ್ರ ಸೇರಿದಂತೆ ಯಾವುದರ ಮೇಲೆ ಪರಿಣಾಮ ಬಿರುವುದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಈ ಬಾರಿ ಎಲ್ಲ ಕಡೆ ಕಾಂಗ್ರೆಸ್ ಪರವಾದ ಅಲೆ ಇದೆ. ರಾಜ್ಯದ ಮತದಾರರು ಕಾಂಗ್ರೆಸ್ ಸರ್ಕಾರ ರಚಿಸುವ ಬಗ್ಗೆ ಮನಸ್ಸು ಮಾಡಿದ್ದಾರೆ ಎನಿಸುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಉತ್ತಮವಾದ ವಾತಾವರಣ ಇದೆ. ಜನರು ಬೆಲೆ ಏರಿಕೆಯಿಂದ ತತ್ತರಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ತಂದಿರುವ ಗ್ಯಾರಂಟಿ ಯೋಜನೆ ಅವರಿಗೆ ಭರವಸೆ ತಂದಿದೆ. ಕಾಂಗ್ರೆಸ್ನ ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಯುವಕರಿಗೆ ಪ್ರೋತ್ಸಾಹ ಧನ, 10 ಕೆ.ಜಿ ಅಕ್ಕಿ ನೀಡಿರುವ ನಮ್ಮ ಪಕ್ಷದ ಪ್ರಣಾಳಿಕೆ ಜನಪ್ರಿಯ ಯೋಜನೆಯಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು. ಮಾಧ್ಯಮಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ ಘಟಾನುಘಟಿ ಅಭ್ಯರ್ಥಿಗಳಿಂದ ಬೃಹತ್ ಮೆರವಣಿಗೆ, ನಾಮಪತ್ರ ಸಲ್ಲಿಕೆ