ಬೆಳಗಾವಿ: ಪಕ್ಷ ಬಯಸಿದರೆ ಸಿಎಂ ಹುದ್ದೆ ಏರಲು ಸಿದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಇಲ್ಲದವರು ಸಿಎಂ ಆಗಿದ್ದಾರೆ. ಕೆಎಂಎಫ್ ಡೈರೆಕ್ಟರ್ ಆಗದೇ ಇರುವವರೂ ಸಹ ಸಿಎಂ ಆಗಿದ್ದಾರೆ. ನನಗೂ ಅಧಿಕಾರ ಕೊಟ್ರೆ ಉತ್ತಮ ಆಡಳಿತ ಕೊಡ್ತೀನಿ ಎಂದಿದ್ದಾರೆ.
ಉತ್ತರ ಪ್ರದೇಶ ಯೋಗಿ ಸರ್ಕಾರ ಮಾದರಿಯಲ್ಲಿ ಕರ್ನಾಟಕ ಸರ್ಕಾರ ನಡೆಯುತ್ತೆ. ನಾನೂ ಸಹ ಪಕ್ಷ ಕಟ್ಟಿದವನು. ಏಪ್ರಿಲ್ 30ರೊಳಗೆ ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ ಆಗುವ ಸಂಭವ ಇದೆ. ಏಪ್ರಿಲ್ 17ರ ಮತದಾನದ ಬಳಿಕ ಬದಲಾವಣೆ ಪ್ರಕ್ರಿಯೆ ಆರಂಭ ಆಗುತ್ತದೆ. ಕರ್ನಾಟಕ ರಾಜಕೀಯದಲ್ಲಿ ಬದಲಾವಾಣೆ ಕೆಲಸ ಆರಂಭ ಆಗುತ್ತೆ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ಕೆಲವರು ಬದಲಾವಣೆ ಆಗಿ ಮೌನ ಆಗ್ತಾರೆ. ಪಾದಯಾತ್ರೆ ರದ್ದು ಪಡಿಸೋದಾಗಿ ಹೇಳಿದ್ದರು. ಹಿಂದುಳಿದ ಆಯೋಗಕ್ಕೆ ಪತ್ರ ಬರೆದ ಬಗ್ಗೆಯೂ ಸುಳ್ಳು ಮಾಹಿತಿ ನೀಡಿದರು. ಡಿಕೆಶಿ ಹಾಗೂ ಕೆಲವರು ಹಣ ಕೊಟ್ಟು ಹೋರಾಟ ಮಾಡಿಸುತ್ತಿದ್ದಾರೆ ಅಂತ ಸುದ್ದಿ ಹರಿಬಿಟ್ಟರು. ಆದರೆ, ನಮ್ಮ ಸಮುದಾಯ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಬಂದು ಹೋರಾಟ ಮಾಡಿದರು.
ಆಗ ದೊಡ್ಡ ಸಂಚಲನ ಸೃಷ್ಟಿಯಾಗಿ ಕೆಲವರಿಗೆ ಶಾಕ್ ಆಯಿತು. ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಸಹ ನಡೀತು. ಹೋರಾಟಕ್ಕೆ ಪ್ಯಾಲೇಸ್ ಗ್ರೌಂಡ್ ಕೊಡಬಾರದು ಎಂದು ಸಚಿವ ಬಸವರಾಜ ಬೊಮ್ಮಾಯಿ ಜೊತೆ ವಿಜಯೇಂದ್ರ ಜಗಳ ಮಾಡಿದ್ದರು. ಇಂದು ಉಪಚುನಾವಣೆಯಲ್ಲಿ ನಮ್ಮ ಸಮುದಾಯ ಉದ್ದೇಶಿಸಿ ಮಾತನಾಡುತ್ತಿರುವ ವಿಜಯೇಂದ್ರಗೆ ಏನು ನೈತಿಕತೆ ಇದೆ ಎಂದರು.
ಕಳೆದ ಉಪಚುನಾವಣೆ ಪ್ರಚಾರಕ್ಕೆ ಸಿಎಂ ಸ್ವತಃ ಕರೆ ಮಾಡುತ್ತಿದ್ದರು. ಯತ್ನಾಳ್ ಬೆಳೆದ್ರೆ ಮಗನ ಭವಿಷ್ಯ ಹಾಳಾಗುತ್ತೆ ಅಂತಾ ಯತ್ನಾಳ ಅವರನ್ನು ಮನೆಯಲ್ಲಿ ಕೂರಿಸಲು ಯತ್ನ ಮಾಡಲಾಗುತ್ತಿದೆ. ನಾನು ಅಡ್ವಾಣಿ, ಅನಂತ ಕುಮಾರ್ ಶಿಷ್ಯ ಚಾಣಕ್ಯ ನೀತಿ ನನಗೆ ಗೊತ್ತು ಎಂದಿದ್ದಾರೆ.
ಇಡಿ ತನಿಖೆ ನಂತ್ರ ಎಲ್ಲವೂ ಗೊತ್ತಾಗುತ್ತೆ
ಜಗದೀಶ್ ಶೆಟ್ಟರ್ ಬಗ್ಗೆ ನಮ್ಮ ಸಮುದಾಯಕ್ಕೆ ಸಿಟ್ಟಿದೆ. ಆದರೆ ಲೋಕಸಭಾ ಚುನಾವಣಾ ಇರೋದ್ರಿಂದ ನಮ್ಮ ಸಮುದಾಯ ಬಿಜೆಪಿಗೆ ಬೆಂಬಲ ಕೊಡಬೇಕು. ಫೆಡರಲ್ ಬ್ಯಾಂಕ್ ಬಗ್ಗೆ ಕಾದು ನೋಡಿ ಹಗರಣ ಬಯಲಾಗುತ್ತೆ. ಫೆಡರಲ್ ಬ್ಯಾಂಕ್ ಹಗರಣದಲ್ಲಿ ಮಹಾನ್ ಭ್ರಷ್ಟರು ಸಿಗ್ತಾರೆ. ವಿಜಯೇಂದ್ರ, ಡಿಕೆಶಿ, ಪಿ.ಚಿದಂಬರಂ, ಅಹ್ಮದ್ ಪಟೇಲ್ ಸಾವಿರಾರು ಕೋಟಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗ ಲಿಂಗಾಯತ ನಾಯಕರು ಹುಟ್ಟಿಕೊಂಡಿದ್ದಾರೆ
ಇತಿಹಾಸದಲ್ಲೇ ದಾಖಲೆ ಬರೆಯುವ ರೀತಿ ಲಿಂಗಾಯತರ ಶಕ್ತಿ ಪ್ರದರ್ಶನವಾಗಿದೆ. ರಾಜಾಹುಲಿ ಬಿಟ್ರೆ ಲಿಂಗಾಯತ ಲೀಡರ್ ಯಾರೂ ಇಲ್ಲ ಅಂತ ಬಿಂಬಿಸಲಾಗುತ್ತಿತ್ತು. ನಮ್ಮ ಹೋರಾಟದಿಂದ ಕರ್ನಾಟಕದಲ್ಲಿ ಬಹಳಷ್ಟು ಹುಲಿಗಳಿವೆ ಎಂದು ಹೋರಾಟದ ಹೊಸ ಅಧ್ಯಾಯ ಪ್ರಾರಂಭವಾಯಿತು. 23 ವರ್ಷಗಳಿಂದ ಸಮುದಾಯದ ಬೇಡಿಕೆಗೆ ಹೋರಾಟ ಮಾಡಿದರೂ ಆಗಿರಲಿಲ್ಲ ಎಂದರು.
ಕೇಂದ್ರ ಸರ್ಕಾರ ಜಾರಿ ಮಾಡಿದ 10 ಪರ್ಸೆಂಟ್ ಒಬಿಸಿ ಮೀಸಲಾತಿ ಜಾರಿಯಾಗಿಲ್ಲ. ಬ್ರಾಹ್ಮಣ, ಕ್ರಿಶ್ಚಿಯನ್, ಉಳಿದೆಲ್ಲ ವೀರಶೈವ ಲಿಂಗಾಯತರಿಗೆ ಸಿಗಬೇಕು. ಸಮಗ್ರವಾಗಿ 6 ತಿಂಗಳಲ್ಲಿ ಮೀಸಲಾತಿ ಪ್ರಕಟ ಆಗುತ್ತದೆ ಎಂದರು.