ಬೆಳಗಾವಿ: ಖಾನಾಪುರ ಬಸ್ ನಿಲ್ದಾಣ ಶಂಕು ಸ್ಥಾಪನೆ ವಿಚಾರದಲ್ಲಿ ಬಿಜೆಪಿ - ಕಾಂಗ್ರೆಸ್ ಮಧ್ಯೆ ರಾಜಕೀಯ ಏರ್ಪಟ್ಟಿದೆ. ನೂತನ ಬಸ್ ನಿಲ್ದಾಣ ಶಂಕು ಸ್ಥಾಪನೆ ದಿನಾಂಕ ನಿಗದಿ ಮಾಡಿ ಮತ್ತೆ ಮುಂದೂಡಿದ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ನಿಗದಿಯಂತೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಶಂಕು ಸ್ಥಾಪನೆ ಕಾರ್ಯಕ್ರಮ ಮುಂದೂಡಿದ್ದರು. ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಕ್ರೆಡಿಟ್ ಹೋಗುತ್ತದೆ ಎಂದು ಬಿಜೆಪಿ ನಾಯಕರಿಂದ ಅಡ್ಡಿ ಆರೋಪ ಕೇಳಿ ಬಂದಿದೆ. ಇದರಿಂದ ರೊಚ್ಚಿಗೆದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ಬೆಂಬಲಿಗರ ಜತೆ ಸೇರಿ ಶಂಕು ಸ್ಥಾಪನೆ ನೆರವೇರಿಸಿದರು.
7.35 ಕೋಟಿ ರೂ.ವೆಚ್ಚದ ಕಾಮಗಾರಿ ಇದಾಗಿದೆ. 2020ರಲ್ಲಿ ಹಣ ಮಂಜೂರಾತಿ ಸಿಕ್ಕು, 2022 ಜನವರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು, ಕೆಲಸ ಆರಂಭಿಸಲು ಅನುಮತಿ ನೀಡಲಾಗಿದೆ. ಆದರೂ ಕಾಮಗಾರಿ ಆರಂಭವಾಗದಿರುವುದಕ್ಕೆ ಶಾಸಕಿ ನಿಂಬಾಳ್ಕರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನೂತನ ಬಸ್ ನಿಲ್ದಾಣ ಶಂಕು ಸ್ಥಾಪನೆ ವೇಳೆ ಕೆಎಸ್ಆರ್ಟಿಸಿ ಅಧಿಕಾರಿಗಳ ಸಾಮೂಹಿಕ ಗೈರಾಗಿದ್ದರು.
ಸವದಿ ವಿರುದ್ಧ ಗುಡುಗು: ಈ ವೇಳೆ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪುರ ಹೈಟೆಕ್ ಬಸ್ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮ ನಿನ್ನೆ(ಭಾನುವಾರ) ನಿಗದಿಯಾಗಿತ್ತು. ಈ ಬಗ್ಗೆ ಆಮಂತ್ರಣ ಪತ್ರಿಕೆ ಸಹ ಮುದ್ರಣವಾಗಿತ್ತು. ಸಾರಿಗೆ ಸಚಿವ ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವರಾದ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಅವರಿಗೂ ಸಹ ಆಹ್ವಾನ ನೀಡಲಾಗಿತ್ತು. ಆದರೆ, ಸಾರಿಗೆ ಅಧಿಕಾರಿಗಳು ಶನಿವಾರ ದಿಢೀರ್ ಕಾರ್ಯಕ್ರಮ ಮುಂದೂಡಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿ ಬಿಜೆಪಿ ನಾಯಕರ ವಿರುದ್ಧ ಅಂಜಲಿ ನಿಂಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ಖಾನಾಪುರ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಡ್ಡಗಾಲು ಹಾಕುತ್ತಿದ್ದಾರೆ. 2020ರಲ್ಲಿ ಕಾಮಗಾರಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರಕಿತ್ತು. ಆದರೆ, ಆಗಿನ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಕಾಮಗಾರಿಗೆ ಅಡ್ಡಿಯುಂಟು ಮಾಡಿದ್ದರು. ನಂತರ ಬಂದ ಸಾರಿಗೆ ಸಚಿವ ಶ್ರೀರಾಮುಲುಗೆ ಮನವಿ ಮಾಡಿದಾಗ ಸಕಾರಾತ್ಮಕ ಸ್ಪಂದನೆ ದೊರಕಿತ್ತು.
ಬಳಿಕ ಕಾಮಗಾರಿ ಟೆಂಡರ್ ಪ್ರಕ್ರಿಯೆ ಶುರುವಾಗಿ ಜನವರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿತ್ತು. ನನಗೆ ಎಲ್ಲ ಅಧಿಕಾರಿಗಳು ದಿನಾಂಕ ನೀಡಿ ಅಂತಾ ಕೇಳುತ್ತಿದ್ದರು. ನಮಗೆ ದಿನಾಂಕ ನೀಡುವ ಅವಶ್ಯಕತೆ ಇಲ್ಲ. ನೀವು ಹೇಳಿದ ದಿನ ಬರ್ತೀನಿ ಎಂದಿದ್ದೆ. ಮೂರ್ನಾಲ್ಕು ಬಾರಿ ದಿನಾಂಕ ಬದಲಾವಣೆ ಮಾಡಿ ಕಾರ್ಯಕ್ರಮ ನಿಗದಿ ಮಾಡಿದ್ದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ನನಗೆ ಕೇಳಿ ದಿನಾಂಕ ನಿಗದಿ ಮಾಡಿಲ್ಲ ಎಂದರು. ಜನರ ಒತ್ತಾಯದ ಮೇರೆಗೆ ಇಂದು ಕಾರ್ಯಕ್ರಮ ಮಾಡುತಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ರಾಷ್ಟ್ರೀಯ ಅಧ್ಯಕ್ಷರ ನೇಮಕ ಗೊಂದಲದಲ್ಲಿರುವ ಕಾಂಗ್ರೆಸ್: ರಾಜ್ಯಸಭೆಯಲ್ಲೂ ಕಾದಿದೆ ಆತಂಕ