ಚಿಕ್ಕೋಡಿ : ಉದ್ಧವ್ ಠಾಕ್ರೆ ಅವರು ಖಾಲಿ ಇದ್ದಾರೆ. ಹೀಗಾಗಿ, ಬೆಳಗಾವಿ, ನಿಪ್ಪಾಣಿ ನಮ್ಮದು ಎಂದು ಟ್ವೀಟ್ ಮಾಡುತ್ತಿದ್ದಾರೆ. ಖಾಲಿ ಇದ್ದವರು ಮಾಡುವಂತ ಕೆಲಸ, ಅದೇನೂ ಆಗುವ ಕೆಲಸ ಅಲ್ಲ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.
ಕಾಗವಾಡ ತಾಲೂಕಿನಲ್ಲಿ ವಿವಿಧ ಕಾಮಗಾರಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಠಾಕ್ರೆ ಅವರ ಬಗ್ಗೆ ಕಿಡಿಕಾರಿದರು. ಸಿಎಂ ಬದಲಾವಣೆ ಬಗೆಗಿನ ಪ್ರಶ್ನೆಗೆ ಅದು ದೊಡ್ಡ ವಿಷಯ ಎಂದು ನಗುತ್ತಾ ಸುಮ್ಮನಾಗಿದ್ದಾರೆ.
ಸಚಿವ ಖಾತೆ ಬದಲಾವಣೆ ವಿಷಯವಾಗಿ ಮಾತನಾಡಿ, ಖಾತೆ ಬಿಡುವ ವಿಚಾರ ಇಲ್ಲ. ಮೈನಾರಿಟಿ ಖಾತೆ ನಾನು ತೆಗೆದುಕೊಂಡಿದ್ದಾಗಿನಿಂದ ಜನರು ಖುಷಿಯಾಗಿದ್ದಾರೆ. ಇಷ್ಟು ಜವಾಬ್ದಾರಿಯುತವಾಗಿ ಯಾರು ಖಾತೆ ನಡೆಸಿಲ್ಲ.
ಈ ಮೊದಲು ಸಚಿವರು ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಕಾಲೇಜಗಳಿಗೆ ಆಸಕ್ತಿ ತೋರಿಸಿದ್ದಾರೆ. ಆದರೆ, ಈ ಬಾರಿ ನಾನೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ 30 ಐಟಿಐ ಕಾಲೇಜ ಪ್ರಾರಂಭಿಸುವ ಚಿಂತನೆ ನಡೆಸಿದ್ದೇವೆ. ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭ ಮಾಡಲು ಚಿಂತನೆ ನಡೆಸಿದ್ದೇವೆ ಎಂದರು.
ಇನ್ನು, ಮಹೇಶ್ ಕುಮಟಳ್ಳಿ ಸಚಿವ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಅವರು ತ್ಯಾಗ ಮಾಡಿದ್ದಾರೆ. ಈ ಬಗ್ಗೆ ನಮ್ಮದೂ ಕೂಡ ಬೇಡಿಕೆ ಇದೆ ಎಂದು ಹೇಳಿದರು.