ಬೆಳಗಾವಿ: ಸಕ್ಕರೆ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಶೀಘ್ರವೇ ಪರಿಹಾರ ಒದಗಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು. ರಾಜ್ಯದಲ್ಲಿರುವ ಸಕ್ಕರೆ ಉದ್ದಿಮೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಪರಿಷ್ಕರಣೆ ಕುರಿತು ಸುವರ್ಣ ಸೌಧದಲ್ಲಿ ಮಂಗಳವಾರ ನಡೆದ ತ್ರಿಪಕ್ಷೀಯ ವೇತನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಳಗಾವಿ ಸಕ್ಕರೆ ಕಾರ್ಖಾನೆಗಳ ಕೇಂದ್ರ ಸ್ಥಾನವಾಗಿದೆ. ಕಾರ್ಮಿಕರ ಏಳಿಗೆಗಾಗಿ ಕಾರ್ಮಿಕ ಇಲಾಖೆ ಸದಾ ಸಿದ್ಧವಾಗಿರುತ್ತದೆ. ರಾಜ್ಯದ ಎಲ್ಲ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಸದನದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಸರ್ಕಾರದ ಆದೇಶದ ಅನುಗುಣವಾಗಿ ಕರ್ತವ್ಯಗಳನ್ನು ನಿರ್ವಹಿಸಲಾಗುವುದು. 2018 ರಲ್ಲಿ ವೇತನ ಹೆಚ್ಚಳದ ಕುರಿತು ಮಾಡಲಾದ ಒಪ್ಪಂದದ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
![Belgavi](https://etvbharatimages.akamaized.net/etvbharat/prod-images/kn-bgm-03-28-hebbar-review-meeting-7201786_28092021193542_2809f_1632837942_833.jpg)
ಮೂಲ ವೇತನದಲ್ಲಿ ಹೆಚ್ಚಳ: ಕಾರ್ಮಿಕರಿಗೆ ಕನಿಷ್ಠ ವೇತನದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆಯಿಂದಾಗಿ ಕಾರ್ಮಿಕರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಯ ಮಂಡಳಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಸಕ್ಕರೆ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಪರಿಷ್ಕರಿಸುವ ಸಂಬಂಧ ದಕ್ಷಿಣ ಭಾರತದ ಸಕ್ಕರೆ ತಯಾರಕರ ಸಂಘ (ಕರ್ನಾಟಕ), ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಗಳ ಫೆಡರೇಶನ್ ಮತ್ತು ಕರ್ನಾಟಕ ಸಕ್ಕರೆ ಕಾರ್ಮಿಕರ ಫೆಡರೇಶನ್ ನಡುವೆ ಒಪ್ಪಂದವಾಗಿದೆ. ಈ ಒಪ್ಪಂದದ ಪ್ರಕಾರ ಕಾರ್ಮಿಕರ ವೇತನವನ್ನು ಪರಿಷ್ಕರಿಸಿ, ಮೂಲ ವೇತನದಲ್ಲಿ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಮಿಕರ ಶ್ರೇಣಿಯಲ್ಲಿ ಸುಧಾರಣೆ: ದಿನಗೂಲಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಅಭಿವೃದ್ಧಿ ಬಗ್ಗೆ ಗಮನ ಹರಿಸಲಾಗುವುದು. 2019ರಲ್ಲಿ ಅನುಮೋದನೆ ಮಾಡಲಾದ ವೇತನದ ಒಪ್ಪಂದದ ನಿಯಮಾವಳಿಗಳ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಮಿಕ ಮಂಡಳಿ ನಿರ್ಮಾಣ: ಅತಿ ಶೀಘ್ರದಲ್ಲಿಯೇ ಮಂಡಳಿ ರಚಿಸಿ, ಸಂಬಳ ಹಾಗೂ ರೈತರಿಗೆ ಪಾವತಿಸುವ ಬಿಲ್ ಹಾಗೂ ಇತರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಕ್ಕರೆ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಕಡಿಮೆ ವೇತನ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಅಲ್ಲದೇ, ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಗಳ ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಹೇಳಿದರು.