ಬೆಳಗಾವಿ/ಬೆಂಗಳೂರು : ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾಸಭೆ ಚಳಿಗಾಲ ಅಧಿವೇಶನದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ವಿಚಾರ ಚರ್ಚೆಗೆ ಬಂತು. ರಾಜ್ಯದಲ್ಲಿ ಹೆಚ್ಚು ಬೇಡಿಕೆ ಇರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಂಖ್ಯಾಬಲವನ್ನು ಶೇ. 25ರಷ್ಟು ಹೆಚ್ಚಿಸಿ 30 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಬಿ ಪಿ ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಒಟ್ಟು 2443 ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 2,28,411 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶದ ಸೌಲಭ್ಯ ಕಲ್ಪಿಸಲಾಗಿದೆ. ಹರಿಹರ ವಿಧಾನಸಭಾ ಕ್ಷೇತ್ರದ 9 ಹಾಸ್ಟೆಲ್ಗಳಲ್ಲಿ 745 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಲಯಗಳ ಪ್ರವೇಶ ಪ್ರಕ್ರಿಯೆ ಮುಗಿದ ಬಳಿಕ ಜಿಲ್ಲೆಯಲ್ಲಿ ಆಯಾ ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ತಾತ್ಕಾಲಿಕವಾಗಿ ಸ್ಥಾನಗಳನ್ನು ಆಂತರಿಕ ವರ್ಗಾವಣೆ ಮಾಡಿಕೊಂಡು ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿ ನಿಲಯಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪ್ರವೇಶ ದೊರಕದ ಅರ್ಹ ಹಿಂದುಳಿದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಅನುದಾನದ ಲಭ್ಯತೆಯ ಅನುಸಾರ, ವಿದ್ಯಾಸಿರಿ ಯೋಜನೆಯಡಿ ಪ್ರತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ರೂ. ನಂತೆ ಗರಿಷ್ಠ 10 ತಿಂಗಳಿಗೆ 15 ಸಾವಿರ ರೂ. ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು, ಭವಿಷ್ಯದ ದೃಷ್ಟಿಯಿಂದ ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಿ, ಪ್ರಸ್ತುತ ಸಮಸ್ಯೆಗೆ ಮಾತ್ರವಲ್ಲ. ಭವಿಷ್ಯದ ದೃಷ್ಟಿಯಿಂದ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.
ನೂತನ ಹಾಸ್ಟೆಲ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ : ರಾಜ್ಯದಲ್ಲಿ ಹಾಸ್ಟೆಲ್ ಸಮಸ್ಯೆಗಳಿದ್ದು, ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ ಸೇರಿದಂತೆ ಹಲವು ಕಡೆ ಹೆಚ್ಚಿನ ಹಾಸ್ಟೆಲ್ ನಿರ್ಮಾಣ ಮಾಡುವ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ತಂಗಡಗಿ ಅವರು ಹೇಳಿದರು.
ಇನ್ನು ಕೊರೊನಾದಿಂದ ಶೈಕ್ಷಣಿಕ ವರ್ಷದಲ್ಲಿ ಏರುಪೇರಾಗಿದೆ. ಪದವಿ, ತಾಂತ್ರಿಕ ಹಾಗೂ ವೃತ್ತಿಪರ ವಿದ್ಯಾರ್ಥಿಗಳಿಗೆ ಬೇರೆ ತಿಂಗಳಲ್ಲಿ ಕಾಲೇಜುಗಳು ಪ್ರಾರಂಭವಾಗುತ್ತವೆ. ಇದರಿಂದ ತೊಂದರೆಯಾಗಿದ್ದು, ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಚಿವರು ಉತ್ತರಿಸಿದರು.
ನಿಗಮಗಳ ನೋಂದಣಿ ಕಾರ್ಯ ಪೂರ್ಣ: ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರ ಹೋದಲ್ಲೆಲ್ಲಾ ಭಾಷಣದಲ್ಲಿ ನಿಗಮಗಳನ್ನು ಮಾಡುವ ಬಗ್ಗೆ ಘೋಷಣೆ ಮಾಡಿ ಆದೇಶ ಮಾಡಿದ್ದರು. ನಿಗಮಗಳ ನೋಂದಣಿ ಕೂಡ ಮಾಡಿಸಿರಲಿಲ್ಲ. ಇದೀಗ ನಾವು ನಿಗಮಗಳ ನೋಂದಣಿ ಮಾಡಿಸಿದ್ದು, ನಿಗಮಗಳಿಗೆ ಅನುದಾನ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸವಿತಾ ಸಮಾಜ, ಅಂಬಿಗರ ಚೌಡಯ್ಯ ನಿಗಮದಲ್ಲಿ ದೊಡ್ಡಬಳ್ಳಾಪುರಕ್ಕೆ ಒಂದೆರೆಡು ಕೊಳವೆ ಬಾವಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆ ಸಮಾಜದ ಸಂಖ್ಯೆ ಹೆಚ್ಚಿದ್ದು, ಕೊಳವೆ ಬಾವಿ ಕೊರೆಯುವ ಸಂಖ್ಯೆ ಹೆಚ್ಚಿಸಬೇಕು. ಈ ವರ್ಷ ಅರ್ಜಿ ಹಾಕಿದವರು ಆಯ್ಕೆಯಾಗದಿದ್ದಲ್ಲಿ, ಮುಂದಿನ ವರ್ಷ ಕೂಡ ಅರ್ಜಿ ಹಾಕುವ ಪರಿಸ್ಥಿತಿ ಇದ್ದು, ಈ ನಿಯಮ ಬದಲಾಗಬೇಕು ಎಂದು ಮನವಿ ಮಾಡಿದರು.
ಮಾರ್ಚ್ ವೇಳೆಗೆ 15 ಸಾವಿರ ಕೊಳವೆ ಬಾವಿ ಪೂರ್ಣ: ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ ಅವರು, ಪ್ರತಿಯೊಂದು ನಿಗಮಕ್ಕೂ ಗುರಿ ನಿಗದಿಪಡಿಸಿ ಕೊಳವೆ ಬಾವಿ ಕೊರೆಯಲಾಗುತ್ತಿದೆ. ಹಿಂದಿನ ನಾಲ್ಕು ವರ್ಷದಲ್ಲಿ ಒಂದೇ ಒಂದು ಕೊಳವೆಬಾವಿ ಕೊರೆದಿಲ್ಲ. ನಾವು ಈಗಾಗಲೇ ನಾಲ್ಕೈದು ತಿಂಗಳಲ್ಲಿ ಅಂದಾಜು ರಾಜ್ಯವಿಡೀ ನಾಲ್ಕು ಸಾವಿರಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಮುಂದಿನ ಮಾರ್ಚ್ ಅಂತ್ಯದೊಳಗೆ ಇಲಾಖೆಯಿಂದ 15 ಸಾವಿರ ಕೊಳವೆ ಬಾವಿ ಕೊರೆಯುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ : ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಪಕ್ಷಗಳ ಪಟ್ಟು: ಭರವಸೆ ಹಿನ್ನೆಲೆ ಧರಣಿ ಹಿಂಪಡೆದ ಬಿಜೆಪಿ-ಜೆಡಿಎಸ್