ಬೆಳಗಾವಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದರು. "ಈ ಪ್ರಶ್ನೆಯನ್ನು ನೀವು ನನ್ನ ಬಳಿ ಕೇಳಬಾರದು, ಸಾರ್ವಜನಿಕ ಹಿತಾಸಕ್ತಿ ಪ್ರಶ್ನೆಗಳಿಗೆ ಮಾತ್ರ ನಾನು ಉತ್ತರಿಸುವೆ. ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ವ್ಯಕ್ತಿತ್ವ ನನ್ನದಲ್ಲ" ಎಂದಿದ್ದಾರೆ.
ಬಿಮ್ಸ್ ಆಸ್ಪತ್ರೆಯಲ್ಲಿ ನಡೆಯಲಿದ್ದ ಸಭೆಗೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳನ್ನು ಸರಿಪಡಿಸುವುದು, ಉನ್ನತೀಕರಣ, ವ್ಯವಸ್ಥೆ ಸುಧಾರಣೆ ಕುರಿತು ಗಮನಹರಿಸುತ್ತೇನೆ ಎಂದು ತಿಳಿಸಿದರು.
ಅವಕಾಶ ಕೊಟ್ಟರೆ ನಾನು ಸಿಎಂ ಆಗುತ್ತೇನೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ನೀವೇ ಅಪಾರ್ಥ ಮಾಡಿಕೊಂಡಿದ್ದೀರಿ. ಅವರಾಗಿಯೇ ಮಾಧ್ಯಮಗಳ ಎದುರು ಬಂದು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ, ಮಾಧ್ಯಮಗಳು ಪದೇ ಪದೇ ಪ್ರಶ್ನಿಸಿದಾಗ ಅವಕಾಶ ಸಿಕ್ಕರೆ ನಾನು ಸಿಎಂ ಆಗುತ್ತೇನೆ ಎಂದಿದ್ದಾರೆ ಅಷ್ಟೇ ಎಂದು ತಿಳಿಸಿದರು.
ನಮ್ಮ ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಯಾವುದೇ ಶಾಸಕರಲ್ಲಿ ಅಸಮಾಧಾನ, ಭಿನ್ನಮತ ಇಲ್ಲ. ಈ ರಾಜ್ಯದ ಅಭಿವೃದ್ಧಿಯೇ ನಮ್ಮ ಪಕ್ಷದ ಧ್ಯೇಯ ಧೋರಣೆಯಾಗಿದೆ. ಹಾಗೆಯೇ, ಸಿಎಂ ನೇತೃತ್ವದ ಸಚಿವರ ಬ್ರೇಕ್‌ಫಾಸ್ಟ್ ಸಭೆಗೆ ನನಗೆ ಆಹ್ವಾನವೇ ಬಂದಿಲ್ಲ. ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಅದೂ ಅಲ್ಲದೇ, ಆರೋಗ್ಯ ಸಮಸ್ಯೆ ಇತ್ತು. ಹೀಗಾಗಿ ಸಿಎಂ ಕರೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ನಾನು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
2017 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ನಾನು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವನಾಗಿದ್ದಾಗ ಬೆಳಗಾವಿ, ಮೈಸೂರು ಮತ್ತು ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದೆವು. ಈಗ ಆಸ್ಪತ್ರೆ ಪೂರ್ಣಗೊಂಡಿದ್ದು, ಆಸ್ಪತ್ರೆಗೆ ಬೇಕಾದ ಉಪಕರಣಗಳು ಮತ್ತು ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಶೀಘ್ರವೇ ಆಸ್ಪತ್ರೆಯನ್ನೂ ಉದ್ಘಾಟಿಸುತ್ತೇವೆ ಎಂದರು.
ಬಿಮ್ಸ್ ನಿರ್ದೇಶಕ ಅಧಿಕಾರಿಗಳ ಕೈಗೊಂಬೆ ಆಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಇದು ಆಸ್ಪತ್ರೆ, ಇಲ್ಲಿ ಯಾಕೆ ಗುಂಪುಗಾರಿಕೆ ಮಾಡಬೇಕು. ಆ ರೀತಿ ಏನಾದರೂ ಕಂಡು ಬಂದರೆ ಕ್ರಮ ನಿಶ್ಚಿತ. ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಇಲ್ಲದಿರುವ ವಿಚಾರದ ಕುರಿತು ಅಧಿಕಾರಿಗಳನ್ನು ಕರೆದು ವಿಚಾರಿಸುತ್ತೇನೆ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಸ್ಥಿರವಾಗಿದೆ, ಸಿಎಂ ಬದಲಾವಣೆ ಇಲ್ಲ: ಆರ್.ವಿ.ದೇಶಪಾಂಡೆ
ಎಂ ಆರ್ ಐ ಸ್ಕ್ಯಾನ್ ಮತ್ತು ಸಿಟಿ ಸ್ಕ್ಯಾನ್ ಮಾಡಿಸಲು ಒಂದು ವಾರ ಕಾಯುವ ಸ್ಥಿತಿಯಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಾದರು ಇದ್ದರೆ ಅದನ್ನು ಸರಿಪಡಿಸುತ್ತೇನೆ. ಎಂ.ಆರ್.ಐ ಸ್ಕ್ಯಾನ್ ಮತ್ತು ಸಿಟಿ ಸ್ಕ್ಯಾನ್ ಮಿಷನ್ಗಳನ್ನು ಹೊಸ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ನಮ್ಮ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ : ಸಚಿವ ಕೃಷ್ಣ ಬೈರೇಗೌಡ