ಅಥಣಿ : ಕರ್ನಾಟಕದ ಜವಳಿ ಮತ್ತು ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ್ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂರಾರು ಬೆಂಬಲಿಗರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕಿದ್ದವರೆ ಉಲ್ಲಂಘನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಮಹಾರಾಷ್ಟ್ರ ರಾಜ್ಯದ ಕೃಷಿ ಮಂತ್ರಿ ವಿಶ್ವಜೀತ್ ಕದಮ್ ಹೂಡಿಕೆಯ ಸಕ್ಕರೆ ಕಾರ್ಖಾನೆ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ನೂರಾರು ಜನರನ್ನು ಸೇರಿಸಿ, ಕೇಂದ್ರ ಸರ್ಕಾರದ ಕೊರೊನಾ ನಿಯಮಗಳನ್ನು ಮುರಿದಿದ್ದಾರೆ.
2500 ಮೆಟ್ರಿಕ್ ಟನ್ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಪೂಜೆಯಲ್ಲಿ ಮಹಾರಾಷ್ಟ್ರದ ಸಚಿವರು, ಶಾಸಕರೊಂದಿಗೆ ಭಾಗಿಯಾದ ಕರ್ನಾಟಕದ ಜವಳಿ ಮತ್ತು ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲರು ಮಾತನಾಡಿ, ಈ ಭಾಗದಲ್ಲಿ ಕದಮ್ ಕುಟುಂಬ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿರೋದು ನಮಗೆ ತುಂಬಾ ಖುಷಿಯಾಗಿದೆ. ಈ ಬಯಲು ಪ್ರದೇಶದಲ್ಲಿ ಯಾವುದೇ ಕಾರ್ಖಾನೆಗಳು ಇರ್ಲಿಲ್ಲ. ಈ ಭಾಗದ ರೈತರಿಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದಾಗುತ್ತದೆ. ಹಾಗೂ ಕಾರ್ಖಾನೆಯಲ್ಲಿ ಪ್ರತಿಶತ ಶೇ.75ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಮಹಾರಾಷ್ಟ್ರದ ಸಚಿವರಿಗೆ ಮನವಿ ಮಾಡಿದರು.
ಪ್ರತಿ ವರ್ಷವೂ ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿಗೆ ನೀರು ಬರಿದು ಆಗುವುದರಿಂದ ಇನ್ಮುಂದೆ ಮಹಾರಾಷ್ಟ್ರದ ಕೃಷಿ ಸಚಿವರು ತಮ್ಮ ಕಾರ್ಖಾನೆ ಸಲುವಾಗಿಯಾದ್ರೂ ಪ್ರತಿ ವರ್ಷವೂ ನದಿಗೆ ನೀರು ಹರಿಸುತ್ತಾರೆ ಎಂದು ಮಾತಿನ ಚಟಾಕಿ ಹಾರಿಸಿದರು. ಮತ್ತು ಬರಗಾಲದ ಈ ಪ್ರದೇಶ ಕೈಗಾರಿಕೆಗಳಿಂದ ಅಭಿವೃದ್ಧಿ ಆಗುತ್ತೆ ಎಂದು ತಿಳಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಕೃಷಿ ಮಂತ್ರಿ ವಿಶ್ವಜೀತ ಕದಮ್, ತಮ್ಮ ಭಾಷಣದ ಕೊನೆಯಲ್ಲಿ ಜೈ ಮಹಾರಾಷ್ಟ್ರ ಎಂದು ಹೇಳುತ್ತಿದ್ದಂತೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಮ್ಎಲ್ಸಿ ಮೋಹನರಾವ್ ಕದಮ್, ಜತ್ತ ಶಾಸಕ ವಿಕ್ರಮ್ ಸಾವಂತ, ಕಾರ್ಖಾನೆ ಯುನಿಟ್ ಚೇರ್ಮನ್ ರಘುನಾಥ್ ಸೇರಿ ಹಲವರು ಉಪಸ್ಥಿತರಿದ್ದರು.