ಬೆಳಗಾವಿ: ಮೈಸೂರು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳಂತಹ ಘಟನೆಗಳು ಸಮಾಜದಲ್ಲಿ ಬೇಕಾದಷ್ಟು ಕಡೆ ನಡೆಯುತ್ತಿರುತ್ತವೆ. ಇವು ಸಮಾಜಕ್ಕೆ ಅಗೌರವ ತರುವಂತಹ ಘಟನೆಗಳಾಗಿವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡಿದ ಅಮಲಿನಲ್ಲಿ ಕಾಮುಕರು ಯುವತಿ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಪೊಲೀಸ್ ವರದಿ ಇದೆ. ಆದರೆ, ಇದು ಸಮಾಜಕ್ಕೆ ಒಳ್ಳೆಯ ಮರ್ಯಾದೆ ತರುವಂತಹ ಘಟನೆ ಅಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಗೃಹ ಸಚಿವ ಅರಗ ಜ್ಞಾನೇಂದ್ರಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಘಟನೆಗಳು ಯಾರದ್ದೇ ಸರ್ಕಾರದಲ್ಲಿ ಆದರೂ ಸಮಾಜ ತಲೆ ತಗ್ಗಿಸಬೇಕು ಹೊರತು ಸರ್ಕಾರವಲ್ಲ. ಇದನ್ನು ರಾಜಕೀಯ ವಿಚಾರವನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಯನ್ನು ನಾನು ನೋಡಿಲ್ಲ. ಆ ಹೇಳಿಕೆ ನೋಡಿ ನಾನು ಮಾತನಾಡುತ್ತೇನೆ. ಮೈಸೂರಿಗೆ ಹೋದಾಗ ಶೋಷಣೆಗೆ ಒಳಗಾದ ಯುವತಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ ಎಂದರು.
ಸೆ.15ರೊಳಗೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ:
ಕಿತ್ತೂರು ಪಟ್ಟಣದ ಹೊರವಲಯದಲ್ಲಿರುವ ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆ ಹಾಗೂ ಕಿತ್ತೂರಿನ ಜೆಜಿ ಹೈಸ್ಕೂಲ್ಗೆ ಶಿಕ್ಷಣ ಸಚಿವರು ದಿಢೀರ್ ಭೇಟಿ ನೀಡಿ ಶಾಲೆ ಆರಂಭದ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು.
ಶೇ.90ರಷ್ಟು ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ. ಇನ್ನುಳಿದ ಶೇ.10ರಷ್ಟು ಶಿಕ್ಷಕರಿಗೆ ಈ ತಿಂಗಳಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆಯದೇ ಶಿಕ್ಷಕರು ತರಗತಿ ತೆಗೆದುಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಪಡೆದುಕೊಂಡು ಶಾಲೆಗೆ ಹಾಜರಾಗಬೇಕು. ಈಗಾಗಲೇ ಶೇ.52ರಷ್ಟು ಪುಸ್ತಕಗಳನ್ನು ಎಲ್ಲ ತಾಲೂಕಿಗೆ ಕೊಟ್ಟಿದ್ದೇವೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬುಕ್ ಬಂದಿದ್ದು, ಅವುಗಳನ್ನು ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಸೆ.15ರೊಳಗೆ ಶೇ.100ರಷ್ಟು ಬುಕ್‍ಗಳನ್ನು ಕೊಡುತ್ತೇವೆ. ಇನ್ನು 1ರಿಂದ 8ನೇ ತರಗತಿ ಆರಂಭ ಬಗ್ಗೆ ಆ.30ರಂದು ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂದರು.
ಓದಿ: ಮೈಸೂರು Gangrape Case: ನೇರವಾಗಿ ತಮಗೆ ವರದಿ ಮಾಡುವಂತೆ ಪೊಲೀಸ್ ಇಲಾಖೆಗೆ ಸಿಎಂ ಸೂಚನೆ