ಬೆಳಗಾವಿ: ಶಿವಸೇನೆ ಮತ್ತು ಬಿಜೆಪಿ ಹೊಂದಾಣಿಕೆ ಹೊಸದಲ್ಲ. ಹಳೆಯ ಸಂಬಂಧವಾಗಿದ್ದು, ಸ್ವಲ್ಪ ಹೊಂದಾಣಿಕೆ ಕೊರತೆಯಿಂದ ದೂರ ಹೋಗಿರಬಹುದು. ಈಗ ಮತ್ತೆ ಒಂದಾಗಲಿದ್ದು, ನಿಶ್ಚಿತವಾಗಿ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಆಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಮೂರು ಸೇರಿ ಯಾವಾಗ ಸರ್ಕಾರ ಸ್ಥಾಪಿಸಿದ್ದಾರೆ. ಆಗಲೇ ಈ ಸರ್ಕಾರ ಬಹಳ ದಿನ ನಡೆಯಲ್ಲ ಎಂದು ನಾವು ತಿಳಿದುಕೊಂಡಿದ್ದೆವು. ತಮ್ಮ ತಮ್ಮಲ್ಲಿಯೇ ಗೊಂದಲ ಮೂಡಿದೆ. ಒಂದು ವಾಹನ ಆರಂಭಿಸುವಾಗ ಪೂರ್ತಿ ಸ್ಟೇರಿಂಗ್ ಒಬ್ಬರ ಕಡೆ ಇರಬೇಕು. ಒಬ್ಬರ ಕಡೆ ಸ್ಟೇರಿಂಗ್, ಒಬ್ಬರ ಕಡೆ ಎಕ್ಸಿಲೇಟರ್, ಒಬ್ಬರ ಕಡೆ ಬ್ರೇಕ್ ಇರುವಾಗ ಅದು ಸುಸೂತ್ರವಾಗಿ ನಡೆಯೋದಿಲ್ಲ ಎಂದು ನಮಗೆ ಮೊದಲೇ ಗೊತ್ತಿತ್ತು ಎಂದರು.
ಹೊಸ ಸರ್ಕಾರ ಸ್ಥಾಪನೆ ಆಗುತ್ತದೆ: ಶಿವಸೇನೆಯವರು ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಮತ್ತು ಎನ್‍ಸಿಪಿಯನ್ನು ವಿರೋಧ ಮಾಡಿಕೊಂಡು ಬಂದಿದ್ದಾರೆ. ಇಷ್ಟು ದಿನ ವಿರೋಧ ಮಾಡಿಕೊಂಡು ಈಗ ಏಕಾಏಕಿ ಅವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ನಡೆಸುವುದನ್ನು ಕಾರ್ಯಕರ್ತರು ಒಪ್ಪುವುದಿಲ್ಲ. ಇದರಿಂದ ಅಸಮಾಧಾನಗೊಂಡು ಹೊರಗಡೆ ಬರುತ್ತಿದ್ದಾರೆ. ಎಲ್ಲ ಕಾನೂನುಗಳ ಸಾಧಕ-ಬಾಧಕಗಳನ್ನು ವಿಚಾರ ಮಾಡಿಕೊಂಡು ಅವರು ಭೇಟಿಯಾಗಬಹುದು. ನಿಶ್ಚಿತವಾಗಿ ಮಹಾರಾಷ್ಟ್ರದಲ್ಲಿ ಒಂದು ಹೊಸ ಸರ್ಕಾರ ಸ್ಥಾಪನೆ ಆಗುತ್ತದೆ ಎಂದು ಹೇಳಿದರು.
ಶಿವಸೇನೆ ಮತ್ತು ಬಿಜೆಪಿ ಹೊಂದಾಣಿಕೆ ಹೊಸದು ಅಲ್ಲ. ಇದು ಹಳೆಯ ಸಂಬಂಧ. ಏನೋ ಸ್ವಲ್ಪ ಹೊಂದಾಣಿಕೆ ಕೊರತೆಯಿಂದ ದೂರ ಹೋಗಿರಬಹುದು. ಸುಮಾರು 25 ವರ್ಷಗಳಿಂದ ನಮ್ಮ ನಡುವೆ ಸಂಬಂಧವಿದೆ. ತತ್ವ ಸಿದ್ಧಾಂತಗಳಲ್ಲಿ ನಮ್ಮ ಎರಡೂ ಪಾರ್ಟಿಗಳಲ್ಲಿ ಹೊಂದಾಣಿಕೆಯಿದೆ. ಈ ರೀತಿ ಇರುವಾಗ ಅಣ್ಣ, ತಮ್ಮಂದಿರು ಸಣ್ಣ ಪುಟ್ಟ ಅಸಮಾಧಾನ ಆದಾಗ ಹೊರಗಡೆ ಹೋಗಿರುತ್ತಾರೆ. ಇದು ಶಾಶ್ವತ ಅಲ್ಲ. ಮತ್ತೆ ಒಂದಾಗಲಿದ್ದಾರೆ ಎಂದರು.
ಸ್ವಂತ ಅನುಭವದಿಂದ ಈ ರೀತಿ ಹೇಳಿಕೆ ನೀಡಿರಬಹುದು: ಪ್ರತ್ಯೇಕ ರಾಜ್ಯದ ಬಗ್ಗೆ ಸಚಿವ ಉಮೇಶ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಉಮೇಶ ಕತ್ತಿ ಅವರ ವೈಯಕ್ತಿಕ ಹೇಳಿಕೆ. ಅದು ನಮ್ಮ ಪಕ್ಷ ಮತ್ತು ಸರ್ಕಾರದ ನಿರ್ಧಾರವಲ್ಲ. ನನಗೆ ಅದರ ಬಗ್ಗೆ ಗೊತ್ತಿಲ್ಲ. ಅವರು ನನಗಿಂತ ಹಿರಿಯರು, ನಾನು 3 ಬಾರಿ ಎಂಎಲ್‍ಎ ಆಗಿದ್ದೇನೆ. ಆದರೆ ಅವರು 9 ಸಲ ಎಂಎಲ್‍ಎ ಆಗಿದ್ದಾರೆ. ಅವರದ್ದೇ ಆದ ಸ್ವಂತ ಅನುಭವದಿಂದ ಈ ರೀತಿ ಹೇಳಿಕೆ ನೀಡಿರಬಹುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಓದಿ: ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ವತಿಯಿಂದ ಇ-ಡ್ರೈವ್ ವ್ಯವಸ್ಥೆಗೆ ಚಾಲನೆ