ಬೆಳಗಾವಿ/ಬೆಂಗಳೂರು: ಲ್ಯಾಂಡ್ ಬ್ಯಾಂಕ್ ಸ್ಥಾಪಿಸಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ಹೂಡಿಕೆದಾರರನ್ನು ಆಕರ್ಷಿಸಿದ್ದೇವೆ. ಒಡಂಬಡಿಕೆ ಮಾಡಿಕೊಂಡಿರುವ ಕಂಪನಿಗಳಿಗೆ 90 ದಿನದ ಒಳಗೆ ಕೈಗಾರಿಕೆ ಸ್ಥಾಪನೆಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರಾದ ಡಾ ಕೆ ಗೋವಿಂದರಾಜು, ಎಂ.ನಾಗರಾಜು, ಮಂಜುನಾಥ ಭಂಡಾರಿ ಅವರು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟಾಟಾ ನ್ಯಾನೋ ಯೋಜನೆಗೆ ನಮ್ಮಲ್ಲಿ ಆಗ ಭೂಮಿ ಇಲ್ಲದ ಕಾರಣ ಗುಜರಾತ್ ಗೆ ಹೋಯಿತು. ಇದರಿಂದ ಪಾಠ ಕಲಿತು ನಾವು ಲ್ಯಾಂಡ್ ಬ್ಯಾಂಕ್ ಮಾಡಿದ್ದೆವು ಎಂದರು.
ಲ್ಯಾಂಡ್ ಬ್ಯಾಂಕ್ ನಲ್ಲಿ 1 ಲಕ್ಷ ಎಕರೆಯನ್ನು ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಡಿನೋಟಿಫೈ ಮಾಡಿದರು. ಇದರಿಂದ ನಮ್ಮ ನಾಲ್ಕು ವರ್ಷದ ಶ್ರಮ ಹಾಳಾಯಿತು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಮಾಡಿದರು. ಹಾಗಾಗಿ ಅವರ ಅವದಿಯಲ್ಲಿ ಇಡೀ ಲ್ಯಾಂಡ್ ಬ್ಯಾಂಕ್ ಇರಲೇ ಇಲ್ಲ. 2013-18 ರವರೆಗೆ ಯಾವ ದೊಡ್ಡ ಉದ್ದಿಮೆಯೂ ಬರಲಿಲ್ಲ. ಯಾಕಂದರೆ ನಮ್ಮ ಬಳಿ ಭೂಮಿಯೇ ಇರಲಿಲ್ಲ. ಭೂಮಿ, ನೀರು, ವಿದ್ಯುತ್ ಇದ್ದರೆ ಮಾತ್ರೆ ಕೈಗಾರಿಕೆ ಬರಲಿವೆ. ಹಾಗಾಗಿ ಈಗ ನಾವು ಬಂದ ನಂತರ ಮತ್ತೆ 50 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
90 ದಿನದಲ್ಲಿ ಎಲ್ಲಾ ಕಡತ ವಿಲೇವಾರಿ: 2022 ರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಎಲ್ಲ ಒಡಂಬಡಿಕೆ ಕುರಿತು 90 ದಿನದಲ್ಲಿ ಆ ಎಲ್ಲಾ ಕಡತ ವಿಲೇವಾರಿ ಮಾಡಲಿದ್ದೇವೆ. ಸಾಧಕ ಬಾಧಕ ನೋಡಿ, ಯಾವ ಜಿಲ್ಲೆಗೆ ಅನುಮತಿ ಕೊಡಬೇಕು ಎಂದು ನಿರ್ಧರಿಸಲಾಗುತ್ತದೆ. ಇದರಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
2010 ಮತ್ತು 2012 ರಲ್ಲಿ ಮಾಡಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಆಗಿದ್ದ ಲೋಪದೋಶಗಳನ್ನು ಗಮಿನಿಸಿ ಅವುಗಳನ್ನು ಸರಿಪಡಿಸಿ ಬಹಳ ಎಚ್ಚರಿಕೆಯಿಂದ 2022 ರಲ್ಲಿ ಹೂಡಿಕೆದಾರರ ಸಮಾವೇಶ ಮಾಡಿದ್ದೇವೆ. 90 ಪರ್ಸೆಂಟ್ ಈ ಬಾರಿ ಟೈರ್ ಟು ಸಿಟಿಯಲ್ಲಿ ಯೋಜನೆಗಳು ಬರಲಿವೆ. ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಬರುವವರಿಗೆ ಇನ್ಸೆಂಟಿವ್, ಸಬ್ಸಿಡಿ ಕೊಡುತ್ತಿಲ್ಲ. ಇತರ ಕಡೆಗೆ ಮಾತ್ರ ಕೊಡಲಿದ್ದೇವೆ ಎಂದರು.
ನಾವು ಕನ್ಯೆ ತೋರಿಸುವ ಕೆಲಸ ಮಾಡಿದ್ದೇವೆ: ಹೂಡಿಕೆದಾರರ ಸಮಾವೇಶದಲ್ಲಿ ಕೃಷಿ ವಲಯದಲ್ಲಿ ಹೂಡಿಕೆಗೂ ನಾವು ಪ್ರಯತ್ನ ನಡೆಸಿದ್ದೆವು, ಯಾವುದೇ ವಲಯವನ್ನೂ ನಾವು ಕಡೆಗಣಿಸಿಲ್ಲ. ಕೇವಲ ಬೃಹತ್ ಕೈಗಾರಿಕೆ, ಆಟೋಮೊಬೈಲ್ ಕ್ಷೇತ್ರ ಮಾತ್ರವಲ್ಲ. ಕೃಷಿ ವಲಯದಲ್ಲಿ ಹೂಡಿಕೆ ಮಾಡಲು ಆಹ್ವಾನ ನೀಡುವ ಪ್ರಯತ್ನ ಮಾಡಿದ್ದೆವು. ಒಂದು ರೀತಿಯಲ್ಲಿ ನಾವು ಕನ್ಯೆ ತೋರಿಸುವ ಕೆಲಸ ಮಾಡಿದ್ದೇವೆ. ವರ ಒಪ್ಪಬೇಕಲ್ಲ. ಅವರ ಆಸಕ್ತಿ ವಲಯಕ್ಕೆ ಹೂಡಿಕೆ ಮಾಡಲು ಬರುತ್ತಿದ್ದಾರೆ ಎಂದು ಕೃಷಿ ವಲಯದಲ್ಲಿನ ಹೂಡಿಕೆಗೆ ಹೂಡಿಕೆದಾರರು ಬಾರದ ಕುರಿತು ಸ್ಪಷ್ಟೀಕರಣ ನೀಡಿದರು.
ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಕರ್ನಾಟಕ ನಂಬರ್ ಒನ್: ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ನಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಟಾಟಾ ನ್ಯಾನೋಗೆ ನಷ್ಟವಾಗಿರಬಹುದು. ಆದರೆ ಮೊದಲೇ ನಷ್ಟದ ಕುರಿತು ಯಾರಿಗೂ ಗೊತ್ತಾಗಲ್ಲ. ಹಾಗಾಗಿ ನಾವು ಅಂತಹ ಕಂಪನಿ ಬರಬಾರದು ಎಂದು ಮೊದಲೇ ನಿರ್ಧರಿಸಲಾಗಲ್ಲ. ಆಟೋಮೊಬೈಲ್ ಉದ್ಯಮ ಬರಬಾರದು ಎಂದರೆ ಹೇಗೆ? ಎಂದು ಪ್ರತಿಪಕ್ಷ ಸದಸ್ಯರ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಹೆಚ್ಎಂಟಿ ಕಂಪನಿಯನ್ನು ನಾವು ಕ್ಲೋಸ್ ಮಾಡಿಲ್ಲ, ನಾವು ಆಟೋಮೊಬೈಲ್ ಗೆ ವಿರೋಧ ಮಾಡಲ್ಲ. ನ್ಯಾನೊವನ್ನು ಯಾಕೆ ಪಶ್ಚಿಮ ಬಂಗಾಳದಲ್ಲಿ ತಿರಸ್ಕರಿಸಿದರು ಎಂದು ತಿಳಿಯಬೇಕು, ವಾಸ್ತವತೆ ಆಧಾರದಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಹೂಡಿಕೆ ಮತ್ತು ಉದ್ಯೋಗಕ್ಕೆ ಹೋಲಿಕೆ ಮಾಡಬಾರದು: ನಂತರ ಮಾತು ಮುಂದುವರೆಸಿದ ಸಚಿವ ನಿರಾಣಿ, ಸದಸ್ಯರು ಹೂಡಿಕೆ ಮತ್ತು ಉದ್ಯೋಗಕ್ಕೆ ಹೋಲಿಕೆ ಮಾಡಿ ವಿವರಣೆ ಕೋರಿದ್ದಾರೆ. ಆದರೆ ಹೂಡಿಕೆ ಮತ್ತು ಉದ್ಯೋಗಕ್ಕೆ ಹೋಲಿಕೆ ಮಾಡಬಾರದು, 10 ಸಾವಿರ ಕೋಟಿಗೆ ಇಷ್ಟು ಉದ್ಯೋಗ, 1 ಸಾವಿರ ಕೋಟಿ ಇಷ್ಟು ಉದ್ಯೋಗ ಎನ್ನುವ ಹೋಲಿಕೆ ಬರಲ್ಲ. ಜವಳಿ ಉದ್ಯಮದಲ್ಲಿ ಉದ್ಯೋಗ ಹೆಚ್ಚಾಗಲಿದೆ. ಆಟೋಮೊಬೈಲ್ ನಲ್ಲಿ ಕಡಿಮೆ ಇರಲಿದೆ ಎಂದು ಸ್ಪಷ್ಟೀಕರಣ ನೀಡಿ ಹೂಡಿಕೆದಾರರ ಸಮಾವೇಶದ ಯಶಸ್ಸನ್ನು ಪ್ರತಿಪಾದಿಸಿದರು.
ಇದನ್ನೂ ಓದಿ:ಮರೆಗುದ್ದಿ ಏತ ನೀರಾವರಿ ಯೋಜನೆಗೆ ಶೀಘ್ರ ಅನುಮೋದನೆ: ಸಚಿವ ಗೋವಿಂದ ಕಾರಜೋಳ