ಬೆಳಗಾವಿ: ನಾನು ಶುದ್ಧ ಸಸ್ಯಾಹಾರಿ. ನಮ್ಮ ಮನೆಯಲ್ಲಿ ವನ್ಯಜೀವಿ ಉತ್ಪನ್ನಗಳು ಇರಲು ಸಾಧ್ಯವೇ ಇಲ್ಲ. ಹುಲಿ, ನವಿಲು ದೂರದ ಮಾತು. ಕುರಿ, ಕೋಳಿ, ಆಕಳು ಕೊಲ್ಲುವುದನ್ನೇ ನಾನು ವಿರೋಧಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಸಚಿವೆಯ ಮನೆಗೆ ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪುತ್ರ ಮೃಣಾಲ್ ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ. ಇದಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವೆ, ಮೃಣಾಲ್ ಹೆಬ್ಬಾಳ್ಕರ್ ಧರಿಸಿದ್ದು ಹುಲಿ ಉಗುರಿನಂತೆ ಕಾಣುವ ಪ್ಲಾಸ್ಟಿಕ್ ಪೆಂಡೆಂಟ್. ಯಾರೋ ಅವನಿಗೆ ಉಡುಗೊರೆ ರೂಪದಲ್ಲಿ ಅದನ್ನು ಕೊಟ್ಟಿದ್ದರು ಎಂದರು.
ಈಗಿನ ಕಾಲದಲ್ಲಿ ಅಸಲಿ ಹುಲಿ ಉಗುರು ಸಿಗುವುದು ಸಾಧ್ಯವೇ ಇಲ್ಲ. ಮೃಣಾಲ್ ಧರಿಸಿದ್ದ ಪೆಂಡೆಂಟನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಫೊರೆನ್ಸಿಕ್ ಲ್ಯಾಬ್ಗೆ ಕಳುಹಿಸಿ ತಪಾಸಣೆ ಮಾಡಿಸುತ್ತಾರೆ. ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ಅದರ ಸಂತತಿ ದಿನೇ ದಿನೇ ಕಡಿಮೆ ಆಗುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿರುವ ನನಗೆ ಮತ್ತು ಸಾಮಾನ್ಯ ಜನರಿಗೂ ಒಂದೇ ಕಾನೂನು. ಹುಲಿ ಸಂತತಿ ಉಳಿಸುವ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ದೇಶದ ಸಂವಿಧಾನದಲ್ಲಿ ಸೆಲೆಬ್ರಿಟಿಗಳಿಗೊಂದು, ಜನಸಾಮಾನ್ಯರಿಗೊಂದು ಎಂದು ಕಾನೂನು ಇಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಎಲ್ಲರಿಗೂ ಕಾನೂನು ಒಂದೇ ಎಂದು ಮಾಧ್ಯಮಗಳ ಪ್ರಶ್ನೆಗೆ ಸಚಿವೆ ಉತ್ತರಿಸಿದರು. ರಾಜ್ಯದಲ್ಲಿ ಅನೇಕರು ವನ್ಯಜೀವಿ ಉತ್ಪನ್ನಗಳಾದ ಜಿಂಕೆ ಕೊಂಬು, ಹುಲಿ ಉಗುರು ಮೊದಲಾದವುಗಳನ್ನು ಮನೆಯಲ್ಲಿ ಇಟ್ಟುಕೊಂಡಿರಬಹುದು. ಸರ್ಕಾರ ಮತ್ತು ಅರಣ್ಯ ಇಲಾಖೆ ಅವುಗಳನ್ನು ಜಪ್ತಿ ಮಾಡಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದು ಒಳಿತು ಎಂದರು.