ಬೆಳಗಾವಿ: ಅಂಕಲಗಿ ಗ್ರಾಮದಲ್ಲಿ ಮಳೆಯಿಂದ ಗೋಡೆ ಕುಸಿತ ಉಂಟಾಗಿ ಸಾವನ್ನಪ್ಪಿದ ಸದಸ್ಯರ ಮನೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭೇಟಿ ಮಾಡಿ ಸಾಂತ್ವನ ಹೇಳಿ, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆ ಬಿದ್ದು ಏಳು ಮಂದಿ ಸಾವಿಗೀಡಾಗಿರುವುದು ನೋವಿನ ಸಂಗತಿ. ಆ ನಷ್ಟ ತುಂಬಿಕೊಡಲು ಆಗುವುದಿಲ್ಲ. ತಲಾ 5 ಲಕ್ಷದಂತೆ ಪರಿಹಾರ ನೀಡಿದ್ದೇವೆ. ಪಿಎಂ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಮಂಜೂರು ಮಾಡಿದ್ದಾರೆ. ಇನ್ನು ಇಬ್ಬರು ಮಕ್ಕಳಿಗೆ ತಲಾ 1 ಲಕ್ಷವನ್ನು ಮಕ್ಕಳ ಕಲ್ಯಾಣ ನಿಧಿಯಿಂದ ನೀಡಲಾಗುವುದು. ಆ ಕುಟುಂಬದವರ ನೋವಿನೊಂದಿಗೆ ಇಡೀ ಸರ್ಕಾರ ಜೊತೆಗಿರಲಿದೆ ಎಂದರು.
ದುಃಸ್ಥಿತಿಯಲ್ಲಿರುವ ಮನೆಗಳ ಸಮೀಕ್ಷೆ ನಡೆಸಿ ಆ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸತ್ತ ಮೇಲೆ ಪರಿಹಾರ ಕೊಡುವುದಕ್ಕಿಂತ ಪ್ರಾಣ ಉಳಿಸಿಕೊಳ್ಳಲು ಆದ್ಯತೆ ನೀಡಬೇಕಾಗಿದೆ ಎಂದರು.
ಇದನ್ನೂ ಓದಿ: ಮನೆ ಕುಸಿತಕ್ಕೆ 7 ಜನರ ಸಾವು: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಅಮವಾಸ್ಯೆ ತಂದ ಆಪತ್ತು:
ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಅರ್ಜುನ ಹಾಗೂ ಭೀಮಪ್ಪ ಸಹೋದರರು ಹಳೆಯ ಮನೆ ನೆಲಸಮಗೊಳಿಸಿ ಹೊಸ ಮನೆ ನಿರ್ಮಿಸಲು ಉದ್ದೇಶಿಸಿದ್ದರು. ಇದಕ್ಕಾಗಿ ಮನೆಯ ಮೇಲ್ಛಾವಣಿ ತೆರವು ಮಾಡಿ ಶೆಡ್ನಲ್ಲಿ ವಾಸವಾಗಿದ್ದರು. ನಿನ್ನೆ ಬೆಳಗ್ಗೆಯೇ ಗೋಡೆ ನೆಲಸಮ ಮಾಡಲು ಜೆಸಿಬಿಯನ್ನು ಕರೆಸಲಾಗಿತ್ತು. ಆದರೆ ಅಮಾವಾಸ್ಯೆ ನೆಪವೊಡ್ಡಿ ನೆಲಸಮ ಕೆಲಸವನ್ನು ಸಹೋದರರು ಮುಂದೂಡಿದ್ದಾರೆ. ಎರಡು ದಿನಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ಗೋಡೆಯ ಒಂದು ಭಾಗ ಕುಸಿದಿದೆ. ಮಳೆ ನಿಂತ ಬಳಿಕ ಗೋಡೆ ನೋಡಲು ಕುಟುಂಬ ಸದಸ್ಯರು ಹೋಗಿದ್ದಾರೆ. ಆಗ ಮತ್ತೊಂದು ಗೋಡೆ ಕುಸಿದಿದ್ದು, ಏಳು ಜನರು ಮೃತರಾಗಿದ್ದರು. ಅಮಾವಾಸ್ಯೆಯೇ ಈ ಕುಟುಂಬದ ಪಾಲಿಗೆ ಆಪತ್ತು ತಂದಿದ್ದಂದೂ ಸುಳ್ಳಲ್ಲ.
ಇದನ್ನೂ ಓದಿ: ಮನೆ ಕುಸಿದು ದುರಂತ: ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಿದ ಜಿಲ್ಲಾಡಳಿತ