ಬೆಳಗಾವಿ: ನಗರದ ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸ್ಥಳಕ್ಕೆ ಎಂಇಎಸ್ನ ಕಾರ್ಯಕರ್ತರು ಆಗಮಿಸಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳದಿಂದ 200 ಮೀಟರ್ ಅಂತರದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದಾರೆ.
ನಿನ್ನೆ ಮಧ್ಯರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಪೀರನವಾಡಿ ವೃತ್ತದಲ್ಲಿ ಸ್ಥಾಪನೆ ಮಾಡಲಾಗಿದೆ. ಈ ವಿಷಯ ತಿಳಿದ ಎಂಇಎಸ್ ಕಾರ್ಯಕರ್ತರು ಶಿವಾಜಿ ಮೂರ್ತಿ ಇರುವಾಗ ರಾಯಣ್ಣ ಮೂರ್ತಿ ಪ್ರತಿಸ್ಥಾಪನೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದಲ್ಲದೆ ಸಣ್ಣದೊಂದು ಶಿವಾಜಿ ಮೂರ್ತಿ ತಂದು ಪ್ರತಿಸ್ಥಾಪನೆಗೆ ಮುಂದಾಗಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಶಿವಾಜಿ ಮೂರ್ತಿಯನ್ನು ವಶಕ್ಕೆ ತೆಗೆದುಕೊಂಡು ಹೋದರು. ಈ ವೇಳೆ ಪೊಲೀಸರೊಂದಿಗೆ ಎಂಇಎಸ್ ಸದಸ್ಯರು ವಾಗ್ವಾದ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಇಷ್ಟೆಲ್ಲಾ ಪ್ರಕ್ಷುಬ್ಧ ವಾತಾವರಣ ಇದ್ದರೂ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ನಗರ ಪೊಲೀಸ್ ಆಯುಕ್ತರು ಕೂಡ ಆಗಮಿಸಿಲ್ಲ ಎನ್ನಲಾಗಿದೆ. ಸ್ಥಳದಲ್ಲಿ ಕನ್ನಡ ಮತ್ತು ಮರಾಠಿ ಯುವಕರ ದಂಡು ಹೆಚ್ಚಾಗುತ್ತಿದ್ದು, ಏನಾದರೂ ಅನಾಹುತ ಸಂಭವಿಸಿದ್ರೆ ಪೊಲೀಸ್ ಇಲಾಖೆಯೇ ನೇರವಾಗಿ ಹೊಣೆ ಆಗಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.