ಬೆಳಗಾವಿ: ಹಣೆಯ ಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಬಾಯಲ್ಲಿ ಬಸವಣ್ಣನ ವಚನ ಹೇಳುತ್ತಾ ಸಮಸ್ತ ಗಣಂಗಳಿಗೆ ಬಸವ ತತ್ವ ಪ್ರಚಾರ ಮಾಡುತ್ತಿದ್ದ ಮಾತೆ ಮಹಾದೇವಿಯವರು ಬೆಳಗಾವಿ ಜೊತೆಗೆ ವಿಶಿಷ್ಠವಾದ ಸಂಭಂದ ಹೊಂದಿದ್ದರು.
ಬಸವ ತತ್ವಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಮಾತೆ ಅಬಲೆಯರ ಪಾಲಿನ ಅಮ್ಮ ಆಗಿದ್ದರು. ಸದಾ ಸಮಾಜದ ಒಳಿತಿಗಾಗಿ ಮಿಡಿಯುತ್ತಿದ್ದ ಈ ಜೀವ ಈಗ ಎಲ್ಲರನ್ನೂ ಅಗಲಿದೆ. ಬೆಳಗಾವಿ ಜಿಲ್ಲೆಯ ಜೊತೆ ಅವಿನಾಭಾವ ಸಂಭದ ಹೊಂದಿದ್ದ ಮಾತೆ ಮಹಾದೇವಿ ತಮ್ಮ ಹೋರಾಟದ ಕ್ಷೇತ್ರವನ್ನಾಗಿಸಿಕೊಂಡಿದ್ದರು. ಜಿಲ್ಲೆಯಲ್ಲಿ ನೂರಾರು ಬಸವ ದಳ ಶಾಖೆ ಪ್ರಾರಂಭಿಸಿ ಬಸವ ತತ್ವದ ಬೋಧನೆ ಮಾಡುತ್ತಿದ್ದರು. ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆಯಾಗಿ ನಾಡಿನ ತುಂಬ ಅನುಯಾಯಿಗಳನ್ನು ಹೊಂದಿದ್ದ ಇವರಿಗೆ ಬೆಳಗಾವಿ ಕೂಡ ಹೊರತಾಗಿಲ್ಲ.
ಮಾತೆಯ ಕೊನೆಯ ಬಹಿರಂಗ ಸಮಾವೇಶ ನಡೆದದ್ದು ಬೆಳಗಾವಿಯಲ್ಲಿ:
ಹೌದು, ಸದಾ ಧರ್ಮ ಜಾಗೃತಿ ಹೋರಾಟ ಹಾಗೂ ಲಿಂಗಾಯತ ಧರ್ಮ ಪ್ರಚಾರ ಮಾಡುತ್ತ ಬಹಿರಂಗ ಸಮಾವೇಶ ಹಮ್ಮಿಕೊಳ್ಳುತ್ತಿದ್ದ ಮಾತೆ ಮಹಾದೇವಿಯರು ಕೊನೆಯ ಬಾರಿಯ ಬಹಿರಂಗ ಸಮಾವೇಶ ಹಮ್ಮಿಕೊಂಡಿದ್ದು ಬೆಳಗಾವಿಯಲ್ಲಿ. ರಾಷ್ಟ್ರೀಯ ಬಸವ ದಳ ಬೆಳಗಾವಿ ಘಟಕದಿಂದ ವಿಶ್ವಗುರು ಬಸವ ಮಂಟಪ ಉದ್ಘಾಟನೆ ಸಮಾರಂಭ 2018 ರ ಮೇ 1ರಂದು ನಡೆದಿತ್ತು. ಇದೇ ಮಾತೆ ಮಹಾದೇವಿಯವರು ಪಾಲ್ಗೊಂಡಿದ್ದ ಕೊನೆಯ ಬಹಿರಂಗ ಸಮಾವೇಶ.
1995ರಲ್ಲಿ ನಡೆದಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತೆಯ ಜೊತೆ ಲಿಂಗಾನಂದ ಸ್ವಾಮೀಜಿ ಕೂಡ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಧರ್ಮದ ಬಗ್ಗೆ ಅರಿವು ಮೂಡಿಸಿ ಬಸವ ತತ್ವದ ಪ್ರಚಾರ ಮಾಡಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ದಳ ಸ್ಥಾಪನೆ ಕೂಡ ಮಾಡಿದ್ದರು. ಬಸವಲಿಂಗಪ್ಪ ಸುಲ್ತಾನಪುರಿ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.
ಜಿಲ್ಲೆಯಲ್ಲಿ ರಾಷ್ಟ್ರೀಯ ಬಸವ ದಳದ 112 ಶಾಖೆಗಳು :
ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 112 ರಾಷ್ಟ್ರೀಯ ಬಸವ ದಳದ ಶಾಖೆಗಳಿವೆ. ಸಾವಿರಾರು ಮಂದಿ ಅನುಯಾಯಿಗಳನ್ನು ಮಾತೆ ಮಹಾದೇವಿ ಹೊಂದಿದ್ದಾರೆ. ಬಸವ ಧರ್ಮದ ಪ್ರಚಾರಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದು ಬೆಳಗಾವಿ ಎನ್ನಬಹುದು.