ಬೆಳಗಾವಿ: ರಾಜ್ಯದ 'ಎ' ಶ್ರೇಣಿಯ ದೇವಸ್ಥಾನಗಳು ಮಾತ್ರವಲ್ಲದೇ ಸಂಪನ್ಮೂಲ ಕ್ರೋಢೀಕರಿಸಿ 'ಬಿ' ಮತ್ತು 'ಸಿ' ಶ್ರೇಣಿಯ ದೇವಸ್ಥಾನಗಳಲ್ಲಿ ಕೂಡ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿರುವ ಸಪ್ತಪದಿ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳು ಎಲ್ಲ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಇಂತಹ ದೊಡ್ಡ ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾವಿರ ಜೋಡಿ ಸಾಮೂಹಿಕ ವಿವಾಹ ಆಯೋಜಿಸಬೇಕು ಎಂಬುದು ನಮ್ಮ ಆಶಯ. ಒಂದು ಜೋಡಿಗೆ 55 ಸಾವಿರ ರೂಪಾಯಿ ವೆಚ್ಚವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ ಎಂದರು.
ವಿವಾಹಕ್ಕೆ ಆಗಮಿಸುವ ವಧು-ವರರ ಕುಟುಂಬ ವರ್ಗದವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗುವುದು. ಮಾರ್ಚ್ 7 ರಂದು ಸಪ್ತಪದಿ ಸಾಮೂಹಿಕ ವಿವಾಹ ಕುರಿತು ವಿಚಾರ ಸಂಕಿರಣ ಏರ್ಪಡಿಸಬೇಕು. ಮಾರ್ಚ್ 28 ಹಾಗೂ ಮೇ 24 ರಂದು ನಡೆಯುವ ವಿವಾಹಕ್ಕೆ ಒಂದು ತಿಂಗಳು ಮುಂಚೆಯೇ ಹೆಸರು ನೋಂದಾಯಿಸಬಹುದು ಎಂದು ಸಚಿವರು ತಿಳಿಸಿದರು.