ಬೆಳಗಾವಿ : ಹಾಡಹಗಲೇ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಗಾವಿಯ ಗೋಕಾಕ್ನ ಮನೆಯೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬಂಧಿತರನ್ನು ರಮೇಶ ಉದ್ದಪ್ಪ ಖಿಲಾರಿ, ದುರ್ಗಪ್ಪ ಸೋಮಲಿಂಗಪ್ಪ ವಡ್ಡರ, ಯಲ್ಲಪ್ಪ ಸಿದ್ದಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪ್ರಕಾಶ ಪೂಜೇರಿ, ರಾಮಸಿದ್ದ ಗುರಶಿದ್ದಪ್ಪ ತಪ್ಸಿ ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಬಸವರಾಜ ವಸಂತ ಖಿಲಾರಿ ಪರಾರಿಯಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, "ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಘಟನೆ ನಡೆದಿದೆ. ಇತ್ತೀಚಿನ ಡಕಾಯಿತಿ ಪ್ರಕರಣದಲ್ಲಿ ಬಂಧಿಸಲಾಗಿದ್ದ ಬೆಣಚಿನಮರಡಿ ಖಿಲಾರಿ ಗ್ಯಾಂಗ್ ಮತ್ತು ಗೋಕಾಕ್ ಎಸ್ಪಿ ಸರ್ಕಾರ್ ಗ್ಯಾಂಗ್ನ ಆರು ಸದಸ್ಯರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸೆಪ್ಟೆಂಬರ್ 29ರಂದು ನೊಂದ ಮಹಿಳೆ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದರು.
ಪ್ರಕರಣದ ಪ್ರಮುಖ ಆರೋಪಿ ರಮೇಶ ಉದ್ದಪ್ಪ ಖಿಲಾರಿ ಬಂಧನ ವೇಳೆ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಬೈಕ್ನಿಂದ ಬಿದ್ದು ಗಾಯಗೊಂಡಿದ್ದಾನೆ. ಈತನನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಕರಣದ ಹಿನ್ನೆಲೆ: ಸೆಪ್ಟೆಂಬರ್ 5ರಂದು ಆರೋಪಿ ಬಸವರಾಜ ಖಿಲಾರಿ, ಸಂತ್ರಸ್ತ ಮಹಿಳೆ ಮತ್ತು ಮತ್ತೋರ್ವ ವ್ಯಕ್ತಿಯನ್ನು ಚಹಾ ಕುಡಿಯಲು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ತನ್ನ ಡಕಾಯಿತಿ ಗ್ಯಾಂಗ್ ಸದಸ್ಯರನ್ನೂ ಮನೆಗೆ ಕರೆಸಿಕೊಂಡಿದ್ದಾನೆ. ಆರೋಪಿಗಳು ಒಬ್ಬೊಬ್ಬರಾಗಿ ಮಹಿಳೆ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಜೊತೆಗಿದ್ದ ಪುರುಷನ ಬಳಿಯಿದ್ದ ಹಣ, ಚಿನ್ನಾಭರಣ, ಎಟಿಎಂ ಪಾಸ್‌ವರ್ಡ್ ಪಡೆದು ಹಣವನ್ನೂ ದೋಚಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನಿಮ್ಮ ಮಾನ ಹರಾಜು ಹಾಕುವುದಲ್ಲದೆ ಕೊಲ್ಲುವುದಾಗಿಯೂ ಜೀವ ಬೆದರಿಕೆ ಹಾಕಿದ್ದಾರೆ. ಆರೋಪಿಗಳು ಆ ಮಹಿಳೆ ಮತ್ತು ಪುರುಷನ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಪ್ರಕರಣವನ್ನು ಹೆಚ್ಚುವರಿ ಎಸ್ಪಿ ವೇಣುಗೋಪಾಲ ಹಾಗೂ ಡಿಎಸ್ಪಿ ಡಿ.ಎಸ್.ಮುಲ್ಲಾ ಮಾರ್ಗದರ್ಶನದಲ್ಲಿ ಸಿಪಿಐ ಗೋಪಾಲ ರಾಠೋಡ್ ನೇತೃತ್ವದ ತಂಡ ಬೇಧಿಸಿದ್ದು, ಅಭಿನಂದನೆ ಸಲ್ಲಿಸುತ್ತೇವೆ. ಸೂಕ್ತ ಬಹುಮಾನ ಕೂಡ ಘೋಷಿಸುತ್ತೇವೆ ಎಂದು ಎಸ್ಪಿ ಹೇಳಿದರು.
ಇದನ್ನೂ ಓದಿ : ವಿವಾಹಿತೆಯನ್ನು ಲೈಂಗಿಕವಾಗಿ ಬಳಸಿಕೊಂಡು ₹7 ಲಕ್ಷಕ್ಕೆ ಬೇಡಿಕೆ ಆರೋಪ: ಕಾರವಾರ ಪೊಲೀಸರಿಂದ ಆರೋಪಿ ಸೆರೆ