ಬೆಳಗಾವಿ: ಮರಾಠಿ ಸಮುದಾಯ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಬಾರಿ ಮುಖಭಂಗವಾಗಿರುವ ಘಟನೆ ನಡೆದಿದೆ.
ಬೆಳಗಾವಿ ಅಧಿವೇಶನದ ಹಿನ್ನೆಲೆ, ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಜೊತೆಗೆ 2ಎ ಮೀಸಲಾತಿ ನೀಡುವಂತೆ ಕೊಂಡಸಕೊಪ್ಪ ಮರಾಠ ಸಮುದಾಯದಿಂದ ಧರಣಿ ನಡೆಸುತ್ತಿದ್ದಾರೆ. ಸಮುದಾಯಕ್ಕೆ ಬೆಂಬಲವಾಗಿ ಕಾಂಗ್ರೆಸ್ ಮುಖಂಡರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಬೆಂಬಲ ನೀಡಲು ಮುಂದಾಗಿದ್ದರು. ಮೊದಲಿಗೆ ಶಾಸಕಿ ಹೆಬ್ಬಾಳ್ಕರ್ ಮಾತನಾಡಿ, ಮರಾಠ ಸಮುದಾಯ ಪರವಾಗಿ ಸದನದಲ್ಲಿ ಮಾತನಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಸತೀಶ್ ಜಾರಕಿಹೊಳಿ ಮಾತನಾಡಲು ಮುಂದಾಗುತ್ತಿದ್ದಂತೆ ಮರಾಠ ಸಮುದಾಯ, ಸತೀಶ್ ಜಾರಕಿಹೊಳಿ ಮಾತುಗಳನ್ನು ತಿರಸ್ಕರಿಸಿ ಜೈ ಶಿವಾಜಿ ಜೈ ಭವಾನಿ ಎಂದು ಘೋಷಣೆ ಕೂಗಿದ್ದಾರೆ. ಸತೀಶ್ ಜಾರಕಿಹೊಳಿ ಮಾತನಾಡುವುದಕ್ಕೆ ಅವಕಾಶ ನೀಡದಂತೆ ಘೋಷಣೆ ಕೂಗಿದ್ದಾರೆ.
ಕಳೆದ ತಿಂಗಳು ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯಲ್ಲಿ ಹಿಂದೂ ಪದ ಅಶ್ಲೀಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ಶಾಸಕ ಸತೀಶ್ ಜಾರಕಿಹೊಳಿ ಅವರು ನೀಡಿದ್ದರು. ಇಂದು ಪ್ರತಿಭಟನಾಕಾರರ ಪರವಾಗಿ ಮಾತನಾಡಲು ತೆರಳಿದ ವೇಳೆ ಅವರ ಮಾತುಗಳನ್ನು ತಿರಸ್ಕರಿಸಿದ ಜನ ಜೈ ಶಿವಾಜಿ, ಜೈ ಭವಾನಿ ಎಂದು ಘೋಷಣೆಯನ್ನು ಕೂಗಿದ್ದಾರೆ.
ಈ ಬಗ್ಗೆ ಬಳಿಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಕೆಲವರು ರಾಜಕೀಯವಾಗಿ ಈ ರೀತಿ ಮಾಡುತ್ತಾರೆ. ಒಬ್ಬ ರಾಜಕಾರಣಿಗೆ ಜೈಕಾರ ಧಿಕ್ಕಾರ ಇರುವುದೇ. ನಿಪ್ಪಾಣಿ ಸಭೆ ಬೇರೆ, ಈ ಮರಾಠ ಸಭೆ ಬೇರೆ. ಆದರೆ, ಕೆಲವರು ರಾಜಕೀಯವಾಗಿ ಈ ರೀತಿ ಮಾಡುತ್ತಾರೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು: ನಿಲುವಳಿ ಸೂಚನೆ ಮಂಡಿಸಿದ ಸಿದ್ದರಾಮಯ್ಯ