ಬೆಳಗಾವಿ : ಹಾವು ಏಣಿಯಂತೆ ಪ್ರತಿ ಸುತ್ತಿನಲ್ಲೂ ಏರಿಳಿತ ಕಾಣುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ 5,240 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆದ್ದು ಬೀಗಿದ್ದಾರೆ.
ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿಯಂತೆ ಕಂಡು ಬಂದ ಈ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಗೆದ್ದು ಸೋತಿದ್ದಾರೆ. ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಬೆಳಗಾವಿ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ತವಕದಲ್ಲಿದ್ದ ಕೈ ನಾಯಕರ ಕನಸಿಗೆ ಬೆಳಗಾವಿ ಮತದಾರ ಸೊಪ್ಪು ಹಾಕಲಿಲ್ಲ. ಹೀಗಾಗಿ, ಮಂಗಳಾ ಅಂಗಡಿ ಬೆಳಗಾವಿ ಕ್ಷೇತ್ರದ ಮೊದಲ ಮಹಿಳಾ ಸಂಸದೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಕೋವಿಡ್ ಹಾಗೂ ಉಪಚುನಾವಣೆ ಎಂಬ ಕಾರಣಕ್ಕೆ ಕಡಿಮೆ ಮತದಾನವಾಗಿದ್ದ ಬೆಳಗಾವಿ ಕ್ಷೇತ್ರದಲ್ಲಿ ಫಲಿತಾಂಶ ಊಹಿಸುವುದು ಕಷ್ಟವಾಗಿತ್ತು. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಅಭ್ಯರ್ಥಿ 25 ಸುತ್ತಿನ ನಂತರ ಹಿನ್ನಡೆ ಅನುಭವಿಸಿದರು.
ಅಲ್ಲಿಂದ ಫಲಿತಾಂಶದ ಅಂತಿಮ ಘಟ್ಟದವರೆಗೆ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಪ್ರತಿ ಸುತ್ತಿನಲ್ಲೂ ಅಂತರದಲ್ಲಿ ಏರಳಿತ ಕಾಣುತ್ತಿತ್ತು.
ಹೀಗಾಗಿ, ಈ ಫಲಿತಾಂಶ ಕ್ಷೇತ್ರವಷ್ಟೇ ಅಲ್ಲದೇ ರಾಜ್ಯದ ಗಮನ ಸೆಳೆಯುವಂತೆ ಮಾಡಿತ್ತು. ಆದರೆ, ಕೊನೆಯ 5 ಸುತ್ತಿನಲ್ಲಿ ಅಚ್ಚರಿಯೆಂಬಂತೆ ಮತ್ತೆ ಮುನ್ನಡೆ ಸಾಧಿಸಿದ ಮಂಗಳಾ ಕೊನೆಗೆ ರೋಚಕ ಗೆಲುವು ದಾಖಲಿಸಿದರು. 18,21,614 ಮತದಾರರಿರುವ ಬೆಳಗಾವಿ ಕ್ಷೇತ್ರದಲ್ಲಿ 11,11,616 ಜನರು ಮತಚಲಾಯಿಸಿದ್ದರು.
ಅದರಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ 4,40,327 ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 4,35,087 ಹಾಗೂ ಎಂಇಎಸ್ ಅಭ್ಯರ್ಥಿ ಶುಭಂ ಶಳಕೆ 1,17,174 ಮತಗಳನ್ನು ಪಡೆದರು.
ತಮ್ಮನ ಸೋಲಿಗೆ ಕಾರಣವಾಯ್ತು ಅಣ್ಣನ ಕ್ಷೇತ್ರ : ಜಾರಕಿಹೊಳಿ ಸಹೋದರರ ರಾಜಕೀಯ ಶಕ್ತಿ ಕೇಂದ್ರ ಎಂದರೆ ಅದು ಗೋಕಾಕ್. ಆದರೆ, ಸತೀಶ್ ಜಾರಕಿಹೊಳಿ ಅವರು ಗೋಕಾಕಿನಲ್ಲಿ ತೀವ್ರ ಹಿನ್ನಡೆ ಅನುಭವಿಸಿದರು. ಇದು ಸತೀಶ್ ಜಾರಕಿಹೊಳಿ ಸೋಲಿಗೆ ಪ್ರಮುಖ ಕಾರಣವಾಯಿತು. ಬಿಜೆಪಿ ಶಾಸಕರಿರುವ ರಾಮದುರ್ಗ, ಸವದತ್ತಿ, ಅರಬಾವಿ, ಬೆಳಗಾವಿ ಉತ್ತರದಲ್ಲಿ ಸತೀಶ್ ಜಾರಕಿಹೊಳಿ ಅಚ್ಛರಿ ಎಂಬಂತೆ ಮುನ್ನಡೆ ಸಾಧಿಸಿದ್ದರು.
ಆದರೆ, ಬೆಳಗಾವಿ ದಕ್ಷಿಣ ಹಾಗೂ ಗೋಕಾಕ್ ಕ್ಷೇತ್ರದ ಮತದಾರರು ಬಿಜೆಪಿಗೆ ಜೈ ಎಂದರು. ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಲೀಡ್ ಸಿಕ್ಕಿದ್ದು, ಅನಾರೋಗ್ಯದ ಮಧ್ಯೆಯೂ ಬಿಜೆಪಿಯ ಗೆಲುವಿಗೆ ರಮೇಶ್ ಜಾರಕಿಹೊಳಿ ಶ್ರಮಿಸಿದರು.
ಆ ಮೂಲಕ ರಮೇಶ್ ಜಾರಕಿಹೊಳಿ ತಮ್ಮ ಸತೀಶ್ ಜಾರಕಿಹೊಳಿ ಸೋಲಿಗೆ ಪ್ರಮುಖ ಕಾರಣಿಕರ್ತರಾದರು. ಮತ್ತೊಂದೆಡೆ ತಮ್ಮ ಬಾಲಚಂದ್ರ ಪ್ರತಿನಿಧಿಸುವ ಅರಬಾವಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿ ಗಮನ ಸೆಳೆದರು.
ಅಧಿಕಾರದಲ್ಲಿದ್ದರೂ ಬಿಜೆಪಿ ನೀರಸ ಪ್ರದರ್ಶನ : ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಹೀಗಾಗಿ, ಬಿಜೆಪಿ ಅಭ್ಯರ್ಥಿಗೆ ಒಂದೆಡೆ ಅನುಕಂಪದ ಅಲೆ ಮತ್ತೊಂದೆಡೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂರು ಸಲ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದರು.
ಅಲ್ಲದೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಈಶ್ವರಪ್ಪ, ಅರವಿಂದ ಲಿಂಬಾವಳಿ ಕೂಡ ಪ್ರಚಾರ ನಡೆಸಿದ್ದರು.
ಸಚಿವರಾದ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದರು. ಹೀಗಿದ್ದರೂ ಬಿಜೆಪಿಗೆ ಗೆಲುವು ಪ್ರಯಾಸವಾಗಿತ್ತು.
ಬಿಜೆಪಿ ಅಂತರ ಕಸಿದ ಎಂಇಎಸ್ : ಬೆಳಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸಾಂಪ್ರದಾಯಿಕ ಮತಗಳಾಗಿದ್ದ ಮರಾಠ ಮತಗಳು ಈ ಸಲ ಎಂಇಎಸ್ ಅಭ್ಯರ್ಥಿ ಬಾಚಿಕೊಂಡರು. ನಿರೀಕ್ಷೆಗೂ ಮೀರಿ ಎಂಇಎಸ್ ಅಭ್ಯರ್ಥಿ ಶುಭಂ ಶೆಳಕೆ ಮತ ಪಡೆದಿದ್ದು ಕೂಡ ಬಿಜೆಪಿ ಗೆಲುವಿನ ಅಂತರ ಕಡಿಮೆ ಆಗಲು ಮುಖ್ಯ ಕಾರಣವಾಯಿತು. 1,17,174 ಮತಗಳನ್ನು ಎಂಇಎಸ್ ಅಭ್ಯರ್ಥಿ ಪಡೆದಿದ್ದು, ಬಿಜೆಪಿಗೆ ದೊಡ್ಡ ಹೊಡೆತವಾಯಿತು.
ಮರಾಠ ಭಾಷಿಕರ ಮತಗಳನ್ನು ಸೆಳೆಯಲು ಬಿಜೆಪಿ ನಾಯಕರು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಕರೆಯಿಸಿ ಪ್ರಚಾರ ನಡೆಸಿತ್ತು. ಆದರೆ, ದೇವೇಂದ್ರ ಫಡ್ನವೀಸ್ ಆಗಮನ ಬಿಜೆಪಿಗೆ ಹೆಚ್ಚಿನ ಲಾಭ ತಂದುಕೊಡಲಿಲ್ಲ.
ಶುಭಂ ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣದಲ್ಲಿ ಅಧಿಕ ಪ್ರಮಾಣದಲ್ಲಿ ಮತ ಪಡೆದುಕೊಂಡರು. ಇದು ಬಿಜೆಪಿಯ ಗೆಲುವಿನ ಅಂತರ ಕಡಿಮೆಯಾಗಲು ಕಾರಣವಾಯಿತು.