ಚಿಕ್ಕೋಡಿ: ಅಬಕಾರಿ ಇಲಾಖೆಯ ಚಿಕ್ಕೋಡಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 50 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ್ನ ಲಕ್ಷ್ಮಣ್ ಬಾಳು ಚವ್ಹಾಣ್ ಬಂಧಿತ. ಈತ ಗೋವಾದಿಂದ ಕೊಲ್ಲಾಪುರಕ್ಕೆ ಕಾರಿನಲ್ಲಿ ಮದ್ಯ ಸಾಗಿಸುವಾಗ ನಗರ ಹೊರವಲಯದಲ್ಲಿರುವ ಅಮರ್ ಹೋಟೆಲ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿದ್ದಾರೆ.
ಸುಮಾರು 53 ಲೀಟರ್ಗಳ 6 ಬಾಕ್ಸ್ಗಳು ಮತ್ತು12 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಅಬಕಾರಿ ಡಿಎಸ್‍ಪಿ ವಿಜಯಕುಮಾರ ಹಿರೇಮಠ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್‍ಸ್ಪೆಕ್ಟರ್ ಬಸವರಾಜ ಕರಮಣ್ಣವರ, ಸಬ್ ಇನ್‍ಸ್ಪೆಕ್ಟರ್ ಸುರೇಂದ್ರ ಅರಗಲ್, ಶಾಂತಾರಾಮ ಹೆಗಡೆ, ಸಿಬ್ಬಂದಿ ಹಸನಸಾಬ ನದಾಫ್, ರಾಜು ಅಂಬಾರಿ, ಸಯ್ಯದ್ ಫಯಾಜ್ ಪಾಲ್ಗೊಂಡಿದ್ದರು.