ಅಥಣಿ : ಬೆಳಗಾವಿ ಜಿಲ್ಲೆಯಲ್ಲಿ ಈಬಾರಿಯ ನೆರೆ ಹಾನಿ ಪ್ರದೇಶದಲ್ಲಿ ಕೇಂದ್ರ ತಂಡ ಪರಿಶೀಲನೆ ನಡೆಸಲಿದೆ. ಅಥಣಿ ತಾಲೂಕಿನಲ್ಲಿ ಪ್ರವಾಹಕ್ಕೆ ಹಾನಿ ಸಂಭವಿಸಿದ ವರದಿ ಈಗಾಗಲೇ ಸಲ್ಲಿಸಲಾಗಿದೆ. ಅಥಣಿ ತಾಲೂಕಿನಲ್ಲಿ ಕೇಂದ್ರ ತಂಡ ಭೇಟಿ ನೀಡುವುದಿಲ್ಲ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ತಾಲೂಕಿನ ಬಳವಾಡ ಗ್ರಾಮದಲ್ಲಿ ನಬಾರ್ಡ್ ಯೋಜನೆಯಡಿ ಶಾಲೆ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾಧ್ಯಮದೊಂದಿಗೆ ಮಾತನಾಡಿ ಅವರು, ಕೃಷ್ಣಾ ನದಿ ದಂಡೆಯ ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೆ 55 ಕೋಟಿ ರೂ. ಅನುದಾನಕ್ಕಾಗಿ ಮುಖ್ಯಮಂತ್ರಿ ಅವರ ಮುಂದೆ ಬೇಡಿಕೆ ಇಟ್ಟಿದ್ದೀವಿ. ಆದರೆ, 20 ಕೋಟಿ ರೂ. ನೀಡುವ ಭರವಸೆ ಸಿಎಂ ನೀಡಿದ್ದಾರೆ ಎಂದರು.
ತಾಲೂಕಿನ ಬಳವಾಡ ಕ್ರಾಸ್ನಿಂದ ಬಳವಾಡ ಗ್ರಾಮದವರಿಗೆ 36 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ. ದಬದಬಹಟ್ಟಿಯಿಂದ ಬಳವಾಡವರೆಗೆ 5 ಕೋಟಿ ರೂ. ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕಳೆದ ವಾರ ಸಿಎಂ ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ವೈಮಾನಿಕ ಸಮೀಕ್ಷೆ ನಡೆಸಲು ಬಂದಾಗ, ಅಥಣಿ ತಾಲೂಕಿನಲ್ಲಿ ಕಳೆದ ಬಾರಿ ಹಾಗೂ ಈ ವರ್ಷದ ನೆರೆ ಹಾನಿ ವರದಿ ಸಲ್ಲಿಸಲಾಗಿದೆ. ಆದಷ್ಟು ಬೇಗನೆ ಇದು ಕಾರ್ಯ ರೂಪಕ್ಕೆ ಬರುತ್ತದೆ ಎಂದರು.