ಚಿಕ್ಕೋಡಿ: ಗಡಿ ವಿಷಯದಲ್ಲಿ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಬಂದಿರುವ ಶಿವಸೇನೆ ಈಗ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರದ ವಿಷಯದಲ್ಲಿ ಕ್ಯಾತೆ ತೆಗೆದಿದೆ. ಪರ್ಮಿಟ್ ಇಲ್ಲದ ಬಸ್‌ಗಳು ಮಹಾರಾಷ್ಟ್ರಕ್ಕೆ ಬರುತ್ತಿವೆ, ಅದನ್ನು ತಡೆಗಟ್ಟಿ ಎಂದು ಮಹಾರಾಷ್ಟ್ರದ ಸಾಂಗ್ಲಿ ಡಿವಿಜನ್ ಕಂಟ್ರೋಲರ್ ಅವರಿಂದ ಚಿಕ್ಕೋಡಿ ಡಿವಿಜನ್ ಕಂಟ್ರೋಲರ್ಗೆ ಪತ್ರ ಬರೆಯಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜದ ಶಾಸ್ತ್ರೀ ವೃತ್ತದಲ್ಲಿ ಬಸ್ ನಿಲುಗಡೆ ಇಲ್ಲ. ಆದರೆ, ಕರ್ನಾಟಕದ ಬಸ್‌ಗಳು ಅಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಬಸ್‌ಗಳಲ್ಲಿ ಹತ್ತಿಸಿಕೊಳ್ಳುತ್ತಿವೆ. ಇದರಿಂದ ಮಹಾರಾಷ್ಟ್ರ ಸಾರಿಗೆ ನಿಗಮಕ್ಕೆ ನಷ್ಟವಾಗುತ್ತಿದೆ ಎಂದು ಶಿವಸೇನೆ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮಕ್ಕೆ ದೂರು ನೀಡಿದೆ. ಈ ದೂರು ಆಧರಿಸಿ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮದ ಸಾಂಗ್ಲಿ ವಿಭಾಗದಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಿಕ್ಕೋಡಿ ವಿಭಾಗಕ್ಕೆ ಪತ್ರ ಬರೆಯಲಾಗಿದೆ.
ಕರ್ನಾಟಕದ ಪರ್ಮಿಟ್ ಇಲ್ಲದ ಬಸ್‌ಗಳು ಮಹಾರಾಷ್ಟ್ರ ಪ್ರವೇಶಿಸದಂತೆ ಪತ್ರ ಬರೆದ ಡಿವಿಜನ್ ಕಂಟ್ರೋಲರ್, ಶಿವಸೇನೆಯಿಂದ ಮಹಾರಾಷ್ಟ್ರದಲ್ಲಿ ಏನಾದರೂ ಅನಾಹುತವಾದರೆ ಅದಕ್ಕೆ ನೀವೆ ಜವಾಬ್ದಾರಿ ಎಂದು ಅಧಿಕೃತ ಸರ್ಕಾರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಿಕ್ಕ ಸಿಕ್ಕಲ್ಲಿ ಬಸ್ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದರಿಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಪರ್ಮಿಟ್ ಇಲ್ಲದ ಬಸ್ ಮಹಾರಾಷ್ಟ್ರ ಪ್ರವೇಶಕ್ಕೆ ನಿರ್ಬಂಧ ಹಾಕಿ ಎಂದು ಪತ್ರ ರವಾನಿಸಲಾಗಿದೆ.