ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮುಗಿದ ನಂತರ ಮೊದಲ ಬಾರಿಗೆ ಮಾರ್ಚ್ 20ರಂದು ಬೆಳಗಾವಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಸಮಾವೇಶ ನಡೆಸಿದ್ದ, ನಾಡಿನಿಂದ ಕಾಂಗ್ರೆಸ್ ಸಮಾವೇಶಕ್ಕೆ ರಾಹುಲ್ ಗಾಂಧಿ ಅವರು ಚಾಲನೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಸ್ವಾಭಿಮಾನದ ಪ್ರಶ್ನೆ ಆಗಿದೆ. ನಮ್ಮ ನೆಲ, ಭಾಷೆ, ಗಡಿಗಳ ವಿಚಾರಗಳ ಕುರಿತಂತೆ ಈ ದೇಶದಲ್ಲಿ ಯಾವುದೇ ತಕರಾರು ಇಲ್ಲ. ವಿಶೇಷವಾಗಿ ಬೆಳಗಾವಿ ಭಾಗದಲ್ಲಿ ಸುರ್ವಣ ಸೌಧ ನಿರ್ಮಿಸಿ, ಭಾಷೆ ವಿಚಾರವಾಗಿ ಗಟ್ಟಿಯಾಗಿ ನಿಂತಿದೆ ಎಂದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಇದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ಎಲ್ಲ ಕನ್ನಡಿಗರ ಶಾಂತಿ ನೆಮ್ಮದಿಯನ್ನು ಕೆಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಐಕ್ಯತೆ ಮೂಡಿಸಲು ಪ್ರಯತ್ನಿಸುತ್ತದೆ. ಮಹಾರಾಷ್ಟ್ರ ಸರ್ಕಾರವೂ ಕರ್ನಾಟಕಕ್ಕೆ ಸೇರಿದ ಗಡಿಭಾಗದ 800 ಕ್ಕೂ ಅಧಿಕ ಹಳ್ಳಿಗಳಿಗೆ ಸಹಾಯ ಮಾಡಲು ಮುಂದಾಗಿದೆ. ಇದು ಚುನಾವಣೆಯ ಗಿಮಿಕ್ ಅಷ್ಟೇ ಎಂದು ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂಗೆ ಹೇಳೋದು ಇಷ್ಟೇ. ನಮ್ಮ ರಾಜ್ಯದ ಸ್ವಾಭಿಮಾನವನ್ನು ಅಡವಿಟ್ಟಿದೀರಿ. ಕರ್ನಾಟಕ ರಾಜ್ಯದಲ್ಲಿ ಯಾರು ಬೇಕಾದರೂ ಬಂದು ಆಡಳಿತ ಮಾಡುವಂತಾಗಿದೆ. 356 ಆರ್ಟಿಕಲ್ ಪ್ರಕಾರ ಮಹಾರಾಷ್ಟ್ರ ರಾಜ್ಯ ಸರ್ಕಾರ ವಜಾ ಮಾಡಬೇಕು. ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಬಂದು ಹಸ್ತಕ್ಷೇಪ ಮಾಡ್ತಿದ್ದಾರೆ.ಇದು ಖಂಡನೀಯ ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಿಬೇಕು ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಮೋಹನ ಲಿಂಬಿಕಾಯಿ ಕಾಂಗ್ರೆಸ್ ಸೇರ್ಪಡೆ:ಮೋಹನ ಲಿಂಬಿಕಾಯಿ ಅವರು ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯಲ್ಲಿ ಉನ್ನತ ಹುದ್ದೆ ನಿಭಾಯಿಸಿದ್ದ ಅವರು, ಸದ್ಯ ಯಾವ ಷರತ್ತು ಇಲ್ಲದೇ, ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್ಗೆ ಸೇರ್ಪಡೆ ಗೊಂಡಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶ: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬೆಳಗಾವಿ ನಗರದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಟಿಕೆಟ್ ಆಕಾಂಕ್ಷಿಗಳನ್ನು ಕುರಿತು ಮಾತನಾಡಲಿದ್ದಾರೆ. ಕಾಂಗ್ರೆಸ್ ನಾಯಕರೆಲ್ಲ ಸೇರಿ ಐತಿಹಾಸಿಕ ರ‌್ಯಾಲಿ ಮಾಡಲು ತೀರ್ಮಾನ ಮಾಡಿದ್ದೇವೆ. ಇಡೀ ರಾಜ್ಯಕ್ಕೆ ಚುನಾವಣೆಯ ಸಂದೇಶ ನೀಡುವ ಪ್ರಯತ್ನ ರಾಹುಲ್ ಗಾಂಧಿ ಮಾಡಲಿದ್ದಾರೆ ಎಂದು ಹೇಳಿದರು.
ಕನ್ನಡಿಗರ ಸ್ವಾಭಿಮಾನ ಕೆಣಕಿದ ಮಹಾ ಸರ್ಕಾರ: ಮಹಾರಾಷ್ಟ್ರ ಸರ್ಕಾರದವರು ಅನಗತ್ಯವಾಗಿ ಮೇಲಿಂದ ಮೇಲೆ ಕಾಲು ಕೆರೆಯುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದೊಂದು ಷಡ್ಯಂತ್ರ. ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಮಹಾಸರ್ಕಾರ ಮಾಡ್ತಿದೆ. ಮಹಾಜನ ಆಯೋಗ ವರದಿ ಕೊಟ್ಟ ಮೇಲೇಯೂ ಮಹಾರಾಷ್ಟ್ರ ಸರ್ಕಾರ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದರು. ಒಂದು ಕಡೆ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ನಡೀತಿದೆ. ಮಹಾರಾಷ್ಟ್ರ ಸರ್ಕಾರದಿಂದ ಕರ್ನಾಟಕಕ್ಕೆ ಸೇರಲು ಬಯಸುವ ಹಳ್ಳಿಗಳಿಗ ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗಿದೆ. ಮಹಾರಾಷ್ಟ ಬಿಜೆಪಿ ಅವರ ಈ ಪ್ರಯತ್ನವನ್ನು ನಾನು ಕಟುವಾಗಿ ಖಂಡಿಸ್ತೀನಿ ಎಂದರು.
ಕನ್ನಡಿಗರ ಹಕ್ಕು ರಕ್ಷಿಸುವಲ್ಲಿ ಸಿಎಂ ವಿಫಲ:ಕನ್ನಡಿಗರು ಶಾಂತವಾಗಿದ್ದೇವೆ ಅಂದ್ರೇ ವೀಕ್ ಆಗಿದ್ದೇವೆ ಎಂದರ್ಥ ಅಲ್ಲ. ನಮ್ಮ ನೆಲ, ಜಲ, ಭಾಷೆ ವಿಚಾರ ಬಂದ್ರೆ ನಾವೆಲ್ಲ ಕನ್ನಡಿಗರು ಎಲ್ಲ ಕನ್ನಡಿಗರು ಕೂಡಾ ಯಾವುದೇ ಕಾರಣಕ್ಕೂ ಒಂದಿಂಚೂ ನೆಲವನ್ನು ಬಿಟ್ಟು ಕೊಡಲ್ಲ. ಮಹಾರಾಷ್ಟ್ರದ ಜತ್ತ ತಾಲೂಕಿನ ಕೆಲ ಹಳ್ಳಿಗಳು ಕರ್ನಾಟಕ್ಕೆ ಸೇರಲು ಬಯಸ್ತಿವೆ. ಕನ್ನಡಿಗರನ್ನು ರಕ್ಷಣೆ ಮಾಡುವುದರಲ್ಲಿ, ಕನ್ನಡಿಗರ ಹಕ್ಕು ರಕ್ಷಣೆ ಮಾಡುವುದರಲ್ಲಿ ಸಿಎಂ ಬೊಮ್ಮಾಯಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಒಕ್ಕೂಟದ ವ್ಯವಸ್ಥೆಗೆ ದಕ್ಕೆ ತರುವಂತಹ, ಅಶಾಂತಿ ನಿರ್ಮಾಣ ಮಾಡುತ್ತಿರುವ ಮಹಾ ಸರ್ಕಾರವನ್ನು ವಜಾಗೊಳಿಸಬೇಕು ಇದನ್ನೆಲ್ಲ ನಿಯಂತ್ರಿಸಲು ಮುಖ್ಯಮಂತ್ರಿ ವಿಫಲವಾಗಿರೋದಕ್ಕೆ ರಾಜೀನಾಮೆ ನೀಡಬೇಕು. ಇದೆಲ್ಲವೂ ಕೇಂದ್ರ ಸರ್ಕಾರದಿಂದ ಸಾಧ್ಯವಿದೆ ಎಂದು ಹೇಳಿದರು. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುರ್ಜೇವಾಲಾ ಮಾತನಾಡಿ, ಬೆಳಗಾವಿಯ ಐತಿಹಾಸಿಕ ನೆಲದಲ್ಲಿ ಕಾಂಗ್ರೆಸ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ. ಈ ವೇಳೆ ಯುವ ಕ್ರಾಂತಿ ಎಂಬ ಹೆಸರಿನ ಗ್ಯಾರಂಟಿ ಕಾರ್ಡ್ ಅನಾವರಣಗೊಳ್ಳಲಿದೆ ಎಂದು ಹೇಳಿದರು.
ಇದನ್ನೂಓದಿ:ಕಾಂಗ್ರೆಸ್ನದ್ದು ಗ್ಯಾರಂಟಿ ಕಾರ್ಡ್ ಅಲ್ಲ, ವಿಸಿಟಿಂಗ್ ಕಾರ್ಡ್.. ಸಿಎಂ ಬೊಮ್ಮಾಯಿ ವ್ಯಂಗ್ಯ