ಬೆಳಗಾವಿ : ನೇಯ್ಗೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ನೇಕಾರರು ಕೊರೊನಾ ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ನೇಯ್ದ ಸೀರೆಗಳು ಮಾರಾಟವಾಗದ ಕಾರಣ ಕಳೆದ ಒಂದು ವಾರದಲ್ಲಿ ಓರ್ವ ಮಹಿಳೆ ಸೇರಿ ಮೂವರು ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಜಿಲ್ಲೆಯಲ್ಲಿಯೇ ಇರುವ ಜವಳಿ ಖಾತೆ ಸಚಿವರು ಮಾತ್ರ ನೇಕಾರರ ಸಮಸ್ಯೆಗೆ ಪರಿಹಾರ ಒದಗಿಸದೇ ತಟಸ್ಥವಾಗಿರುವುದು ನೇಕಾರ ಕುಂಟುಂಬಗಳ ಆಕ್ರೋಶಕ್ಕೆ ಕಾರಣವಾಗಿದೆ.
ಆರ್ಥಿಕ ಸಂಕಷ್ಟದಲ್ಲಿ ನೇಕಾರರ ಬದುಕು.. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯ ಶಂಕರ ಶಡಿಶ್ಯಾಳ (63)ಎಂಬುವರು ಆನಂದಪುರದಲ್ಲಿ ಆರು ಮಗ್ಗಗಳ ಮಾಲೀಕರಾಗಿದ್ದರು. ಸಾಕಷ್ಟು ಬಂಡವಾಳ ಹಾಕಿ ಮಗ್ಗಗಳಲ್ಲಿ ನೇಯ್ದು 350 ಸೀರೆ ತಯಾರಿಸಿದ್ದರು. ಆದರೆ, ಸೀರೆಗಳು ಮಾರಾಟವಾಗದೇ ಉಳಿದಿದ್ದರಿಂದ ಸಾಕಷ್ಟು ಸಾಲ ಮಾಡಿ ತೀರಿಸಲಾಗದೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ವಡಗಾವಿಯ ಲಕ್ಷ್ಮಿನಗರದ ಸುಜಿತ್ ಉಪ್ಪರಿ (38) ಹಾಗೂ ಸುವರ್ಣ ಕಾಶಿನಾಥ ಕಾಮಕರ್ (47) ಎಂಬ ಮಹಿಳೆ ಸೇರಿ ಒಟ್ಟು ಮೂರು ಮಂದಿ ನೇಕಾರರು ಕೇವಲ ಒಂದು ವಾರದ ಅವಧಿಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಈ ಮೂವರ ಸಾವಿಗೂ ಆರ್ಥಿಕ ಸಮಸ್ಯೆಯೇ ಕಾರಣವಾಗಿದೆ ಎನ್ನಲಾಗಿದೆ. ಇಷ್ಟಾದರೂ ಜಿಲ್ಲೆಯ ಜವಳಿ ಖಾತೆಯ ಸಚಿವ ಶ್ರೀಮಂತ ಪಾಟೀಲ್ ಮಾತ್ರ ನೇಕಾರರ ಸಮಸ್ಯೆಗೆ ಸ್ಪಂದಿಸದೇ ಉದ್ಧಟತನ ತೋರಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸಂಕಷ್ಟದಲ್ಲಿರೋ ನೇಕಾರರ ಕಡೆ ತಿರುಗಿಯೂ ನೋಡದ ಶಾಸಕರು, ಬಂದ್ರೆಷ್ಟು,ಬಿಟ್ರೆಷ್ಟು ಎನ್ನುತ್ತಿವೆ ನೋವಿನಲ್ಲಿರುವ ಕುಟುಂಬಗಳು.
ಬೆಳಗಾವಿಯಲ್ಲಿ ನೇಕಾರಿಕೆ ವೃತ್ತಿ ಆಧಾರವಾಗಿಟ್ಟುಕೊಂಡ ಬೆಳಗಾವಿಯ ವಡಗಾಂವ ಹಾಗೂ ಚೆನ್ನಮ್ಮನ ಕಿತ್ತೂರು,ಯಮಕನಮರಡಿ, ರಾಮದುರ್ಗ ಸೇರಿ ಇತರ ಜಿಲ್ಲೆಗಳಲ್ಲಿ ಸಾವಿರಾರು ಕುಟುಂಬಗಳು ಪ್ರಸ್ತುತ ತುತ್ತು ಅನ್ನಕ್ಕೂ ಪರದಾಡುತ್ತಿವೆ. ಕಳೆದ ವಾರ ಸರ್ಕಾರದಿಂದ ನೀಡಲಾಗುತ್ತಿದ್ದ ಆಹಾರದ ಕಿಟ್‍ಗಾಗಿ ನೇಕಾರರು ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಎದುರು ಪರದಾಡಿದ್ದ ಘಟನೆ ಕೂಡ ನಡೆದಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಸೇರಿ ಇತರ ಜಿಲ್ಲೆಗಳಲ್ಲಿ ಅಂದಾಜು 50 ಲಕ್ಷಕ್ಕೂ ಹೆಚ್ಚಿನ ಸೀರೆಗಳ ದಾಸ್ತಾನುಗಳಿವೆ ಎನ್ನಲಾಗಿದೆ. ಇವುಗಳನ್ನು ಸರ್ಕಾರ ಖರೀದಿ ಮಾಡಿದ್ರೆ, ನೇಕಾರರ ಜೀವನ ಸ್ವಲ್ಪಮಟ್ಟಿಗಾದ್ರೂ ಸುಧಾರಿಸಬಹುದು ಎನ್ನಲಾಗುತ್ತಿದೆ. ಆದರೆ, ಈ ಕುರಿತು ನೇಕಾರರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಬೇಕಾದ ಜವಳಿ ಸಚಿವ ಶ್ರೀಮಂತ್ ಪಾಟೀಲ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ತಿಲ್ಲ ಅಂತಾ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ನೇಕಾರರ ಸಂಕಷ್ಟಕ್ಕೆ ಮರುಗಿ ರಾಜ್ಯದ ಎಲ್ಲ 224 ಶಾಸಕರಿಗೂ ಸೀರೆ ಖರೀದಿಸುವಂತೆ ಮನವಿ ಪತ್ರ ಬರೆದಿದ್ರು. ಜಿಲ್ಲೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಸಚಿವರು ಮಾತ್ರ ಕಣ್ಣಿದ್ದು, ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಜವಳಿ ಸಚಿವರು ತಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ನೇಕಾರರು ಒತ್ತಾಯಿಸಿದ್ದಾರೆ.