ಅಥಣಿ: ಹಿಪ್ಪರಗಿ ಮಾರ್ಗವಾಗಿ ಅಥಣಿ, ಜಮಖಂಡಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮವಾಗಿ ಕೈಯಲ್ಲಿ ಜೀವ ಹಿಡಿದು ಸಂಚಾರ ಮಾಡುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಜೀರೋ ಪಾಯಿಂಟ್ ಸಂಪರ್ಕ ಕಲ್ಪಿಸುವ ಈ ರಸ್ತೆ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಿಂದ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲ. ಇನ್ನು ಈ ರಸ್ತೆಯಲ್ಲಿ ಪ್ರಯಾಣಿಕರು ಅನಿವಾರ್ಯವಾಗಿ ಸಂಚಾರ ಮಾಡುವಂತಾಗಿದೆ. ಹಿಪ್ಪರಗಿ ಬ್ಯಾರೇಜ್ ನಿರ್ಮಾಣ ಸಮಯದಲ್ಲಿ ಈ ರಸ್ತೆ ಅತಿ ಎತ್ತರವಾಗಿ ನಿರ್ಮಾಣವಾಗಿದೆ. ರಸ್ತೆ ಅಕ್ಕಪಕ್ಕದಲ್ಲಿ ಯಾವುದೇ ತಡೆಗೋಡೆ ಇಲ್ಲದೆ ಇರುವುದರಿಂದ ವಾಹನ ಸವಾರರು ಭಯದಲ್ಲೇ ಸವಾರಿ ಮಾಡುತ್ತಿದ್ದಾರೆ.
ಈ ರಸ್ತೆ ಎತ್ತರವಾಗಿದ್ದರಿಂದ ಅಪಘಾತಗಳು ಸಂಭವಿಸದಿರಲು ಮುಂಜಾಗ್ರತಾ ಕ್ರಮವಾಗಿ ಕಳೆದ ಎರಡು ವರ್ಷಗಳ ಹಿಂದೆ ಪರ್ಯಾಯವಾಗಿ ಬೇರೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅದು ಮಣ್ಣಿನ ರಸ್ತೆ ಆಗಿದ್ದರಿಂದ ಮಳೆಯಾದರೆ ಸಂಪೂರ್ಣ ಕೆಸರಾಗುತ್ತದೆ. ಅಥಣಿ ತಾಲೂಕಿನಲ್ಲಿ ಪ್ರಭಾವಿ ರಾಜಕಾರಣಿಗಳು ಇದ್ದರೂ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೀನಾಮೇಷ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.