ಬೆಳಗಾವಿ : ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರಾಜಕೀಯ ನಿಲುವುಗಳಿಲ್ಲ. ಹೀಗಾಗಿ, ಇದೊಂದು ಬಸ್ ಸ್ಟ್ಯಾಂಡ್ ಇದ್ದಂತೆ. ಇಲ್ಲಿ ಬಸ್ಗಳು, ಟೆಂಪೋ, ರಿಕ್ಷಾಗಳು ಬರುತ್ತವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಂದೊಂದು ರಾಜ್ಯದಲ್ಲಿ ಒಂದೊಂದು ನಿಲುವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಸರ್ಕಾರ ರಚಿಸಿದೆ. ಬೇರೆ ಕಡೆ ಕಮ್ಯೂನಿಸ್ಟ್ ಪಕ್ಷದ ಜತೆಗೆ ಕೈಜೋಡಿಸಿದೆ. ರಾಜಕೀಯ ವಿಚಾರಧಾರೆ ಈ ಪಕ್ಷಕ್ಕಿಲ್ಲ ಎಂದು ಗೇಲಿ ಮಾಡಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಬಿ ಎಸ್ ಯಡಿಯೂರಪ್ಪನವರೇ ಸರ್ಕಾರ ಮುಂದುವರೆಸಲಿದ್ದಾರೆ. ಈ ವಿಚಾರದಲ್ಲಿ ಯಾವ ಗೊಂದಲವೂ ಬೇಡ ಎಂದು ಸ್ಪಷ್ಟಪಡಿಸಿದರು.
ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿಯಿಂದ ಹೈಕಮಾಂಡ್ಗೆ ದೊಡ್ಡ ಮೊತ್ತದ ಹಣ ಸಂದಾಯ ಎಂಬ ಹೆಚ್‌ಡಿಕೆ ಆರೋಪಕ್ಕೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ಕುಮಾರಸ್ವಾಮಿ ಪಾಪ ಅವರು ಏನೇನೋ ಹೇಳ್ತಿರ್ತಾರೆ. ಯಾಕೆಂದರೆ, ಅವರ ಪಕ್ಷದ ಸ್ಥಿತಿ ತುಂಬಾ ಗಂಭೀರವಿದೆ. ಸುದ್ದಿಯಲ್ಲಿರುವ ಸಲುವಾಗಿ ಈ ರೀತಿ ಮಾತಾಡ್ತಿರ್ತಾರೆ.
ಹೆಚ್‌ಡಿಕೆ ಪಕ್ಷದಂತೆ ಬೇರ್ಯಾರದ್ದೋ ಕಡೆ ದುಡ್ಡು ಪಡ್ಕೊಂಡು ರಾಜ್ಯಸಭೆಗೆ ಆಯ್ಕೆ ಮಾಡುವ ಪರಿಸ್ಥಿತಿ ನಮಗಿಲ್ಲ. ಬಿಜೆಪಿ ಇವತ್ತಿಗೂ ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಪಕ್ಷ ನಡೆಸುತ್ತಿದೆ. ಚುನಾವಣೆಯಲ್ಲೂ ಕಾನೂನು ವ್ಯಾಪ್ತಿಯಲ್ಲಿ ನಾಲ್ಕು ಜನಗಳಿಂದ ದುಡ್ಡು ಕೇಳಿ ಪಕ್ಷದ ಖರ್ಚು ನಿಭಾಯಿಸಿದ್ದೇವೆ.
ಆದರೆ, ಪಾಪ ಅವರಿಗೆ ಬೇರೆ ಬೇರೆ ವ್ಯವಸ್ಥೆ, ಎಲ್ಲವೂ ಬೇಕಾಗುತ್ತೆ. ಹೀಗಾಗಿ, ಅವರು ರಾಜ್ಯಸಭಾ, ವಿಧಾನಪರಿಷತ್ ಟಿಕೆಟ್ ಮಾರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.