ಬೆಳಗಾವಿ: ಉಚಿತ ಪಡಿತರ ಕಿಟ್ ಪಡೆಯಲು ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಎದುರು ಮತ್ತೆ ಮಹಿಳೆಯರು ಜಮಾಯಿಸಿದ್ದು, ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಈ ವೇಳೆ ನೂಕುನುಗ್ಗಲಿನಿಂದ ವೃದ್ಧೆಯೊಬ್ಬರು ಕುಸಿದು ಬಿದ್ದ ಘಟನೆ ನಡೆದಿದ್ದು, ತಕ್ಷಣವೇ ವೃದ್ಧೆಯನ್ನು ಆಟೋದಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು.
ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿದಲ್ಲಿರುವ ಸುರೇಶ್ ಅಂಗಡಿಯವರ ಕಚೇರಿಗೆ ಇಂದು ಮಧ್ಯಾಹ್ನವೇ ಸಾವಿರಾರು ಮಹಿಳೆಯರು ಜಮಾಯಿಸಿದ್ದರು. ಈ ವೇಳೆ ಮಹಿಳೆಯರನ್ನು ಚದುರಿಸಲು ಚೆನ್ನಮ್ಮ ಪಡೆ ಸಿಬ್ಬಂದಿ ಲಘು ಲಾಠಿ ಚಾರ್ಜ್ ಮಾಡಿದರು. ಪೊಲೀಸರ ಹೊಡೆತಕ್ಕೆ ಮಹಿಳೆಯರು ಚೆಲ್ಲಾಪಿಲ್ಲಿಯಾದರು. ಉಚಿತ ಪಡಿತ ಕಿಟ್ ಪಡೆಯಲು ಮಹಿಳೆಯರು ಕೈಯಲ್ಲಿ ಗುರುತಿನ ಚೀಟಿ ಹಿಡಿದು ಗುಂಪುಗುಂಪಾಗಿ ಸೇರಿದ್ದರು. ಸಾಮಾಜಿಕ ಅಂತರ ಮರೆತು ಮಹಿಳೆಯರು ಗುಂಪು ಗುಂಪಾಗಿ ನಿಂತಿದ್ದರು.
ಕಳೆದ ವಾರ ಸಚಿವ ಸುರೇಶ್ ಅಂಗಡಿ ಅವರು ಆಹಾರ ಕಿಟ್ ವಿತರಿಸುತ್ತಿರುವ ಸುದ್ದಿ ತಿಳಿದು, ಸಾವಿರಾರು ಮಹಿಳೆಯರು ಅವರ ಕಚೇರಿ ಎದುರು ಜಮಾಯಿಸಿದ್ದರು. ಆಗ ಸಚಿವರು ಸರ್ಕಾರಕ್ಕೆ ಪತ್ರ ಬರೆದು ಕಾರ್ಮಿಕ ಇಲಾಖೆ ಮೂಲಕ, ಕಾರ್ಮಿಕರಿಗೆ ಕಿಟ್ ನೀಡುವಂತೆ ಮನವಿ ಮಾಡಿದ್ದರು. ಇದೀಗ ಕಾರ್ಮಿಕ ಇಲಾಖೆಯಿಂದ ಸಚಿವರ ಕಚೇರಿ ಎದುರು ಕಿಟ್ ವಿತರಿಸಲಾಗುತ್ತಿದ್ದು, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಜಮಾಯಿಸಿದ್ದರಿಂದ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ.
ಇಂದು ಬೆಳಗ್ಗೆ ನೋಂದಣಿ ಮಾಡಿಸಿದವರಿಗೆ ಸಚಿವ ಸುರೇಶ್ ಅಂಗಡಿ ಕಿಟ್ ವಿತರಿಸಿದ್ದರು. ಈಗ ಮಧ್ಯಾಹ್ನದ ಬಳಿಕ ಮತ್ತೆ ಕಿಟ್ ಪಡೆಯಲು ಸಾವಿರಾರು ಮಹಿಳೆಯರು ಸಚಿವರ ಕಚೇರಿ ಎದುರು ಸೇರಿದ್ದಾರೆ.