ಕಿತ್ತೂರು (ಬೆಳಗಾವಿ): ಸರ್ಕಾರಿ ವೈದ್ಯೆಗೆ ಹಫ್ತಾ ನೀಡುವಂತೆ ಜೀವಬೆದರಿಕೆ ಹಾಕಿದ್ದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಿತ್ತೂರು ಪಟ್ಟಣದ ಜನತೆ ಸ್ವಯಂ ಪ್ರೇರಿತವಾಗಿಯೇ ಅಂಗಡಿ ಮುಂಗಟುಗಳನ್ನು ಬಂದ್ ಮಾಡಿ ವೈದ್ಯೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕಿತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅನ್ನಪೂರ್ಣ ಅಂಗಡಿ ಎಂಬುವವರಿಗೆ ಅದೇ ಪಟ್ಟಣದ ಅಬ್ದುಲ್ ಮುಜಾವರ್ ಹಾಗೂ ಆತನ ಸ್ನೇಹಿತರು ಹಪ್ತಾ ನೀಡುವಂತೆ ಜೀವಬೆದರಿಕೆ ಹಾಕಿದ್ದರು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಡಾ. ಅನ್ನಪೂರ್ಣ ಈ ಕುರಿತು ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಬ್ದುಲ್ ಮುಜಾವರ್ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವೈದ್ಯೆಗೆ ಧೈರ್ಯ ತುಂಬಬೇಕಾದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಘಟನೆ ಬಳಿಕವೂ ಗಮನ ಹರಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದರಿಂದ ಆಕ್ರೋಶಗೊಂಡ ವೈದ್ಯರು, ಅರೋಪಿ ಅಬ್ದುಲ್ ಮುಜಾವರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇನ್ನು ಬಂದ್ಗೆ ಸಾರ್ವಜನಿಕರು, ತಾಲೂಕಿನ ಎಲ್ಲಾ ಅಂಗಡಿಗಳು ಹಾಗೂ ಖಾಸಗಿ ವೈದ್ಯರ ಸಂಘ ಮತ್ತು ಕಿತ್ತೂರು ಪಟ್ಟಣದ ವರ್ತಕರ ಸಂಘ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳು ಬೆಂಬಲ ನೀಡುವ ಮೂಲಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.