ಬೆಳಗಾವಿ: ಇಲ್ಲಿಯವರೆಗೆ ಬೆಳಗಾವಿ ಅಧಿವೇಶನದಲ್ಲಿ ನಡೆದ ಚರ್ಚೆಗಳಲ್ಲಿ ಎಷ್ಟು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಇದರ ಕುರಿತಾಗಿ ಈಗಿನ ಚಳಿಗಾಲ ಅಧಿವೇಶನದ ಮುನ್ನ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ್ ಆಗ್ರಹಿಸಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಕರ ಬರಗಾಲದ ಹಿನ್ನೆಲೆ ರೈತ ಸಮುದಾಯ ಸಂಕಷ್ಟದಲ್ಲಿದೆ. ಅಧಿವೇಶನದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ಬೃಹತ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ರಾಜ್ಯದ 223 ತಾಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ. ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಸೇರಿ ವಿವಿಧ ಕಾರಣಗಳಿಂದ ಬೆಳೆ ಹಾನಿ ಅನುಭವಿಸಿ ರೈತರ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕೈಗಾರಿಕೆ, ಉದ್ಯಮಿಗಳಿಗೆ ಸಾಲ ಮತ್ತು ತೆರಿಗೆ ಮನ್ನಾ ಮಾಡಿರುವ ಮಾದರಿ ರೈತರ ಎಲ್ಲ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು ಎಂದು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ವತಿಯಿಂದ ರೈತ ಅಧಿವೇಶನ ನಡೆಸಲಾಗುತ್ತಿದೆ. ದೆಹಲಿಯಲ್ಲಿ ಒಂದು ವರ್ಷ ಹೋರಾಟ ಮಾಡಿದ ರಾಷ್ಟ್ರೀಯ ರೈತ ಮುಖಂಡರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಬ್ಬು ಬೆಳೆಗೆ ಬೆಲೆ ನಿಗದಿ ಮಾಡಬೇಕು ಎಂದು ಹಲವು ಬಾರಿ ಹೋರಾಟ ಮಾಡಿದರೂ ಇಲ್ಲಿಯವರೆಗೂ ಸಮರ್ಪಕವಾಗಿ ಬೆಲೆ ನಿಗದಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಅಧಿವೇಶನದಲ್ಲಿ ರೈತರ ಮೂಗಿಗೆ ರಾಜಕಾರಣಿಗಳು ತುಪ್ಪ ಸವರುವ ಕೆಲಸ ಮಾಡಬೇಡಿ. ಕಬ್ಬು ಬೆಳೆಗಾರರ ಸಮಸ್ಯೆ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.
ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ. ರಾಜ್ಯದ ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ನೀಡುತ್ತಿಲ್ಲ. ಸರ್ಕಾರ ರೈತರ ಮಕ್ಕಳ ಮದುವೆಯಾಗುವ ಹೆಣ್ಣಿಗೆ ಸಬ್ಸಿಡಿ ಕೊಡುತ್ತೇವೆ ಎನ್ನುವ ನಿರ್ಧಾರ ತೆಗೆದುಕೊಳ್ಳುವಂತೆ ಶಾಂತಕುಮಾರ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಗುರುಸಿದ್ದಪ್ಪ ಕೋಟಗಿ, ಬಾಪುಗೌಡ ಪಾಟೀಲ, ಎಸ್.ಬಿ.ಸಿದ್ನಾಳ, ಹತ್ತಳ್ಳಿ ದೇವರಾಜ್, ಯಲ್ಲಪ್ಪ ಕುಲಗೋಡ, ಶಂಕರಗೌಡ ಹೊಸಗೌಡರ, ಶಿವಾನಂದ ಬೊಳತ್ತಿನ ಸೇರಿ ಮತ್ತಿತರರು ಇದ್ದರು.
ಇದನ್ನೂಓದಿ:ಸುವರ್ಣ ವಿಧಾನಸೌಧದ ಸುತ್ತ ಹುಲುಸಾಗಿ ಬೆಳೆದ ಮೇವು ಕಟಾವಿಗೆ ಅನುಮತಿ ನೀಡುವಂತೆ ರೈತರ ಮನವಿ