ಬೆಳಗಾವಿ: ಮಹಾಮಾರಿ ಕೊರೊನಾ ಭೀತಿಯಿಂದ ಈಗಷ್ಟೇ ಹೊರ ಬಂದಿರುವ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದ ಜನತೆಗೆ ಚಿರತೆಯೊಂದು ಭಯ ಹುಟ್ಟಿಸಿದ್ದು, ಯುವಕನೋರ್ವ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಶೈಲಗೌಡ ಪಾಟೀಲ ಮೇಲೆ ಚಿರತೆ ದಾಳಿ ಮಾಡಿದೆ. ಆಗ ಕೈಯಲ್ಲಿದ್ದ ಬಡಿಗೆಯಿಂದ ಚಿರತೆಗೆ ಹೊಡೆದಿರುವ ಯುವಕ ಬಳಿಕ ಚೀರಾಡಿ ಅಕ್ಕಪಕ್ಕದ ಜನರನ್ನು ಸೇರಿಸಿದ್ದಾನೆ. ಜನರನ್ನು ಕಂಡು ಚಿರತೆ ಓಡಿ ಹೋಗಿದೆ. ಇನ್ನು ಮಂಗಳವಾರ ರಾತ್ರಿಯಷ್ಟೆ ಇದೇ ಗ್ರಾಮದ ಕುರಿಯ ಮೇಲೆ ಚಿರತೆ ದಾಳಿ ಮಾಡಿ ಬಲಿ ತೆಗೆದುಕೊಂಡಿತ್ತು.
ಹೀಗಾಗಿ ಚಿರತೆ ಸಾಗಿರುವ ಹೆಜ್ಜೆಗಳನ್ನು ಗುರುತಿಸಲಾಗುತ್ತಿದ್ದು, ಈಗಾಗಲೇ ಮೇಕೆ ಬಲಿ ಪಡೆದ ಸ್ಥಳದಲ್ಲಿ ಚಿರತೆ ಪತ್ತೆಗೆ ಬೋನು ಅಳವಡಿಸಲಾಗಿದೆ. ಹೀಗಾಗಿ ಹಸಿದಿರುವ ಚಿರತೆ ಬಂದು ಬಲೆಗೆ ಬೀಳಲೆಂದು ಅದರೊಳಗೆ ಕುರಿಯೊಂದನ್ನು ಇರಿಸಲಾಗಿದೆ.
ಇನ್ನು ಚಿರತೆ ಪತ್ತೆಗೆ ಕಾರ್ಯಚರಣೆ ಮುಂದುವರೆದಿದೆ ಎಂದು ಗೋಲಿಹಳ್ಳಿ ವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿ ಶ್ರೀನಾಥ ಕಡೋಲ್ಕರ್ ಹೇಳಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲೇ ಠಿಕಾಣಿ ಹೂಡಿ ಚಿರತೆ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.