ಅಥಣಿ: ತಾಲೂಕಿನ ಕೊಹಳ್ಳಿ ಐಗಳಿ ಹಾಗೂ ತೇಲಸಂಗ ವಿಜಯಪುರ ರಸ್ತೆ ಅಭಿವೃದ್ಧಿಗಾಗಿ ನಾಲ್ಕು ಕೋಟಿ ರೂಗಳ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಕಕಮರಿಯಲ್ಲಿ ಸುಮಾರು 8 ಎಂಟು ಲಕ್ಷ ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಸಕ ಮಹೇಶ್ ಕುಮಠಳ್ಳಿ ಭೂಮಿ ಪೂಜೆ ನೆರವೇರಿಸಿದರು.
ಇದೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ. ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು ಮಾಡಬೇಕು. ಕಾಮಗಾರಿ ನಡೆಯುವಾಗ ಸ್ಥಳೀಯರು ನಿಂತು ಕಾಮಗಾರಿ ಮಾಡಿಸಿಕೊಳ್ಳಬೇಕು. ಮತ್ತು ಕೋವಿಡ್-19 ತಡೆಗಟ್ಟಲು ಎಲ್ಲರೂ ಮನೆಯಲ್ಲಿ ಇದ್ದು ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊಂದಿಗೆ ಈ ಪಿಡುಗನ್ನು ಹೋಗಲಾಡಿಸಬೇಕು ಎಂದರು.
ಯಾರೂ ಭಯಪಡದೇ ಸರಿಯಾದ ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಇದರ ಜೊತೆ ಬದುಕುತ್ತ ಬಿಸಿ ನೀರು, ಕಷಾಯ ಕುಡಿದು ಸೂಕ್ತ ಕ್ರಮ ವಹಿಸಿ ಇದನ್ನು ಓಡಿಸಬೇಕಾಗಿದೆ. ರೋಗ ತಡೆಗೆ ಪ್ರಯತ್ನ ಮಾಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಈಗಾಗಲೇ ಸಿಎಂ ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ಲಾಕ್ಡೌನ್ ವಿಸ್ತರಿಸುವುದಿಲ್ಲವೆಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೊರೊನಾಗೆ ಹೆದರದೆ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ ಎಂದು ಹೇಳಿದರು.