ಬೆಳಗಾವಿ : ಎಲ್ಲ ಧರ್ಮಗಳ ಆಚಾರ-ವಿಚಾರಕ್ಕೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಆದ್ರೆ, ಎಂದೂ ಇಲ್ಲದ ಹಿಜಾಬ್ ವಿವಾದ ಇವತ್ತೇಕೆ ಸೃಷ್ಟಿಯಾಗಿದೆ? ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದರು.
ಹಿಜಾಬ್ ವಿವಾದದ ಕುರಿತು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮಗಳ ಆಚಾರ ವಿಚಾರಕ್ಕೆ ಸಂವಿಧಾನದಲ್ಲೇ ಅವಕಾಶ ನೀಡಲಾಗಿದೆ.
ನಮಗೆ ಯಾವ ಬಟ್ಟೆ ಬೇಕೋ, ಅದನ್ನು ತೊಡಬಹುದು. ಇಷ್ಟವಾದ ಆಹಾರ ಸೇವಿಸಬಹುದು. ಪ್ರತಿಯೊಂದಕ್ಕೂ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಹಿಜಾಬ್ ಪದ್ಧತಿ ಮೊದಲಿನಿಂದ ಇದೆ. ಈಗ ಅದನ್ನು ವಿರೋಧಿಸುವುದು ಸರಿಯಲ್ಲ ಎಂದರು.
ಹಿಜಾಬ್ ಇಂದು ಧರಿಸುತ್ತಿದ್ದರೆ ಅದು ತಪ್ಪು. ಕಾಲೇಜ್ನವರು ಮುಂಚೆಯಿಂದಲೇ ಹಿಜಾಬ್‌ಗೆ ಅವಕಾಶ ಕೊಟ್ಟಿದ್ದಾರೆ. ಅದು ಹಾಗೆಯೇ ನಡೆದುಕೊಂಡು ಹೋಗಲಿ. ಶಿಕ್ಷಣ ಎಲ್ಲ ಮಕ್ಕಳ ಅಧಿಕಾರ ಬದ್ಧ ಹಕ್ಕು, ಶಿಕ್ಷಣದಲ್ಲಿ ಧರ್ಮ, ಜಾತಿ ಇರಬಾರದು. ಸಿಖ್ ಸಮುದಾಯದವರು ಪೇಟ ಧರಿಸುತ್ತಾರೆ.
ಅದನ್ನೀಗ ವಿರೋಧಿಸುವುದು ತಪ್ಪು. ಈಗ ಮುಸಲ್ಮಾನ ಬಾಂಧವರು ಬುರ್ಖಾ ಹಾಕ್ತಾರೆ, ಹಿಜಾಬ್ ತೊಡುತ್ತಾರೆ. ಗುಜರಾತ್‌ನ ಹೆಣ್ಣು ಮಕ್ಕಳು ಪರದಾ ಬಿಡುತ್ತಾರೆ. ಅನೇಕ ಧರ್ಮ, ಜಾತಿ ಇರುವ ಭಾರತ ದೇಶದಲ್ಲಿ ಹಲವು ಆಚಾರ-ವಿಚಾರಗಳಿವೆ. ಇದನ್ನೆಲ್ಲಾ ಒಂದೊಂದಾಗಿ ನಾವು ಕಟ್ ಮಾಡಲಿಕ್ಕೆ ಆಗಲ್ಲ ಎಂದರು.
ವಿವಿಧತೆಯಲ್ಲಿ ಏಕತೆ ಮೆರೆಯೋದು ನಮ್ಮ ದೇಶದ ವೈಶಿಷ್ಟ್ಯ. ಆಚರಣೆಗಳಿಗೆ ನಾವ್ಯಾರು ಕೂಡ ಬ್ರೇಕ್ ಹಾಕುವುದಕ್ಕೆ ಆಗುವುದಿಲ್ಲ. ಹಿಜಾಬ್ ವಿಚಾರದಲ್ಲಿ ಖಂಡಿತವಾಗಿ ರಾಜಕಾರಣ ಆಗುತ್ತಿದೆ. ಆರಂಭ ಯಾರು ಮಾಡಿದರು, ಅಂತ್ಯ ಯಾವಾಗ ಆಗುತ್ತದೆ ಎಂಬುದು ನಮಗೆ ಬೇಕಾಗಿಲ್ಲ.
ಯಾವತ್ತೂ ಇಲ್ಲದ ವಿವಾದ ಇವತ್ತು ಯಾಕೆ ಎಂಬುದಷ್ಟೇ ನಮ್ಮ ಪ್ರಶ್ನೆ. ಎಂ.ಕೆ.ಹುಬ್ಬಳ್ಳಿ, ಕಿತ್ತೂರಲ್ಲಿ ಸಾಕಷ್ಟು ಮುಸಲ್ಮಾನ ಬಾಂಧವರಿದ್ದಾರೆ. ಬುರ್ಖಾ ಹಾಕುವುದರಿಂದ, ಹಿಜಾಬ್ ಧರಿಸುವುದರಿಂದ ನಮಗೇನು ತೊಂದರೆ ಆಗಿಲ್ಲ. ನಮ್ಮಿಂದಲೂ ಅವರಿಗೆ ಏನೂ ತೊಂದರೆ ಆಗಿಲ್ಲ. ಶೈಕ್ಷಣಿಕ ಅಂಗಳಕ್ಕೆ ಈ ವಿವಾದ ಪ್ರವೇಶ ಆಗಬಾರದು ಎಂದರು.