ಬೆಳಗಾವಿ: ಸಿಡಿ ಪ್ರಕರಣದಲ್ಲಿ ಡಿಕೆಶಿ ಕೈವಾಡ ಇರುವ ಬಗ್ಗೆ ಯುವತಿಯ ಪೋಷಕರೇ ಆರೋಪಿಸಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದಾರೆ. ನಿನ್ನೆ ನಾನು ಕೂಡ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದೇನೆ. ಇಂಥ ಘಟನೆಗಳು ಬರ್ತಾವೆ, ತಲೆಕೆಡಿಸಿಕೊಳ್ಳಬೇಡ ಶಾಂತವಾಗಿರು ಎಂದು ಧೈರ್ಯ ತುಂಬಿದ್ದೇನೆ. ಡಿಕೆಶಿ ವಿರುದ್ಧ ಯುವತಿ ತಂದೆ-ತಾಯಿಯೇ ಆರೋಪ ಮಾಡಿದ್ದಾರೆ. ಅವರು ಆರೋಪ ಮಾಡುತ್ತಿರುವುದು ಸತ್ಯ ಅನಿಸುತ್ತದೆ ಎಂದರು.
ಇದರಲ್ಲಿ ನೈತಿಕ ಹೊಣೆಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಗಂಭೀರ ವಿಚಾರ ಮಾಡಬೇಕು. ಆರೋಪ ಬಂದಮೇಲೆ ತಕ್ಷಣವೇ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಅದರಂತೆಯೇ ಡಿ.ಕೆ ಶಿವಕುಮಾರ್ ಮೊದಲು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಮುಂದೆ ಏನು ಇದೆ ಎಂಬುದು ಕರ್ನಾಟಕ ಜನತೆಗೆ ಗೊತ್ತಾಗಬೇಕು ಎಂದರು.
ಸಿಡಿ ಪ್ರಕರಣ ನಿಜವಾಗಿಯೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತೆ. ಇದು ಮೋಸಗಾರಿಕೆ ತಂತ್ರ ಯಾರು ಮಾಡಿದ್ದಾರೆ? ಹಿನ್ನೆಲೆ ಯಾರಿದ್ದಾರೆ? ಎಲ್ಲರಿಗೂ ಗೊತ್ತಿರೋ ವಿಚಾರ. ಎಲ್ಲಾ ಪಕ್ಷದವರು ಇದನ್ನ ವಿಚಾರ ಮಾಡಬೇಕು. ಸಿಡಿ ಫ್ಯಾಕ್ಟರಿ ಯಾರು? ಸಿಡಿ ಲೇಡಿ ಯಾರು? ಇದರ ಪ್ರೊಡ್ಯೂಸರ್ ಯಾರು? ಡೈರೆಕ್ಟರ್ ಯಾರು? ಇದನ್ನು ವಿಚಾರ ಮಾಡಿ ಮುಂದಿನ ದಿನಗಳಲ್ಲಿ ಹುಷಾರಾಗಿ ಅವರ ಜೊತೆ ಆಸನ ಹಂಚಿಕೊಳ್ಳಬೇಕು. ಮುಂದೊಂದು ದಿನ ಇದು ಎಲ್ಲರಿಗೂ ಕಾದಿದೆ ಎಂದು ಲಖನ್ ಹೇಳಿದ್ರು.
ಕಾಂಗ್ರೆಸ್ ಹೈಕಮಾಂಡ್ ಡಿ ಕೆ ಶಿವಕುಮಾರ ಅವರ ರಾಜೀನಾಮೆ ಪಡೆಯಬೇಕು. ಇಲ್ಲವಾದರೆ ಇದು ಮೂರು ಕ್ಷೇತ್ರಗಳ ಉಪಚುನಾಣೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಮಸ್ಕಿ, ಬಸವಕಲ್ಯಾಣ, ಹಾಗೂ ಬೆಳಗಾವಿ ಉಪಚುನಾವಣೆಗಳ ಮೇಲೆ ಇದರ ಎಫೆಕ್ಟ್ ಆಗಲಿದೆ. ಯಾರನ್ನು ನಂಬಿ ಯಾರು ಪ್ರಚಾರಕ್ಕೆ ಹೋಗಬೇಕು ತಿಳಿಯುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರೆ ಕ್ಯಾನವಾಸ್ ಮಾಡುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಶತ ಕೋಟಿ ಒಡೆಯ ಸತೀಶ್ ಜಾರಕಿಹೊಳಿ: ಮಂಗಳಾ ಅಂಗಡಿ ಎಷ್ಟು ಕೋಟಿ ಆಸ್ತಿ ಒಡತಿ?