ಗೋಕಾಕ್: ಕ್ಷೇತ್ರದ ಮೇಲಿನ ಹಿಡಿತಕ್ಕಾಗಿ ಜಾರಕಿಹೊಳಿ ಸಹೋದರರ ಫೈಟ್ ಶುರುವಾಗಿದ್ದು, ಉಪ ಚುನಾವಣೆಯಲ್ಲಿ ಪ್ರತಿಷ್ಠೆಗಾಗಿ ಸಹೋದರರ ಕಾದಾಟ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ಫುಲ್ ಸ್ಟಾಪ್ ಇಡುತ್ತಾ ಕಾದು ನೋಡಬೇಕಾಗಿದೆ.
ಸುಪ್ರೀಂ ತೀರ್ಪಿನ ಬಳಿಕ ಮತ್ತಷ್ಟು ರಂಗು ಪಡೆದ ಕದನದಲ್ಲಿ ಪಕ್ಷದ ಆಧಾರದ ಮೇಲೆ ಚುನಾವಣೆ ಎದುರಿಸಲು ತಯಾರಿ ನಡೆದಿದೆ. 10 ವರ್ಷಗಳ ಬಳಿಕ ಜಾರಕಿಹೊಳಿ ಸಹೋದರರು ಮುಖಾಮುಖಿಯಾಗಿದ್ದು, ಗೋಕಾಕ್ ಕ್ಷೇತ್ರದಲ್ಲಿ ಈ ಹಿಂದೆ ಜಾರಕಿಹೊಳಿ ಸಹೋದರರ ಪೈಪೋಟಿ ನಡೆದಿತ್ತು. ಅಂದರೆ 2008ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ರಮೇಶ್ ಜಾರಕಿಹೊಳಿ, ಬಿಜೆಪಿಯಿಂದ ಭೀಮಶಿ ಜಾರಕಿಹೊಳಿ ಸ್ಪರ್ಧೆ ಮಾಡಿ ಆಗ ಚುನಾವಣೆಯಲ್ಲಿ ಪ್ರತಿಷ್ಠೆ ಪಣಕ್ಕೆ ಇಟ್ಟು ಸಹೋದರರು ಹೋರಾಡಿದ್ದರು. ಬಿಜೆಪಿಯಿಂದ ಭೀಮಶಿ ಜಾರಕಿಹೊಳಿ ಪರಾಭವಗೊಂಡಿದ್ದರು.
ಈ ಬಾರಿ ಮತ್ತೆ ಜಾರಕಿಹೊಳಿ ಸಹೋದರರು ಮುಖಾಮುಖಿ ಪಕ್ಕಾ ಆಗಿದ್ದು, ಅನರ್ಹ ಶಾಸಕರ ಪ್ರಕರಣದ ತೀರ್ಪು ಬಂದಿರುವುದರಿಂದ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಇನ್ನು ಕಾಂಗ್ರೆಸ್ನಿಂದ ಲಖನ್ ಜಾರಕಿಹೊಳಿ ಅಭ್ಯರ್ಥಿ ಎಂದು ಘೋಷಣೆ ಒಂದೇ ಬಾಕಿ ಇದೆ. ರಮೇಶ್ ಜಾರಕಿಹೊಳಿ ಬೆನ್ನಿಗೆ ಬಾಲಚಂದ್ರ ಜಾರಕಿಹೊಳಿ ನಿಂತಿದ್ದರೆ, ಲಖನ್ ಬೆನ್ನಿಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಿಂತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸತೀಶ್ ಹಗಲಿರುಳು ಸುತ್ತಿ ಪ್ರಚಾರ ಮಾಡಿ ಕಾರ್ಯಕರ್ತರನ್ನು ಒಗ್ಗೂಡಿಸಿದ್ದಾರೆ. ಶತಾಯಗತಾಯ ಮತ್ತೆ ಗೋಕಾಕ್ ಮೇಲೆ ಹಿಡಿತ ಸಾಧಿಸಲು ಸತೀಶ್ ಹೋರಾಟ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ ಜಾರಕಿಹೊಳಿ ಸಹೋದರರ ಈ ಎಲ್ಲಾ ರಾಜಕೀಯ ಆಟಕ್ಕೆ ಡಿ. 5ರಂದು ಮತದಾರರು ಏನು ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ.