ಬೆಳಗಾವಿ: ವಿಧಾನಪರಿಷತ್ತಿನಲ್ಲಿ ಮತಾಂತರ ನಿಷೇಧ ಕಾಯ್ದೆ ಇನ್ನೂ ಮಂಡನೆ ಆಗಿಲ್ಲ. ಮಂಡನೆಯಾದ ಬಳಿಕ ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷೇತರ ಪರಿಷತ್ ಸದಸ್ಯ. ಪರಿಷತ್‍ನಲ್ಲಿ ಮತಾಂತರ ನಿಷೇಧ ಕಾಯ್ದೆ ಇನ್ನೂ ಮಂಡನೆ ಆಗಿಲ್ಲ. ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ. ಪರಿಷತ್‍ನಲ್ಲಿ ಮೊದಲು ಬಿಲ್ ಮಂಡನೆ ಆಗಲಿ, ನಂತರ ಈ ಬಗ್ಗೆ ನೋಡೋಣ. ಈ ಸಂಬಂಧ ನನ್ನನ್ನು ಬಿಜೆಪಿ- ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ ಎಂದರು.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ನನ್ನ ಗುರುಗಳು. ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಬಿಜೆಪಿ ಬೆಂಬಲಿಸಬೇಡಿ ಎಂದು ಸಿದ್ದರಾಮಯ್ಯ ಹೇಳಿದರೆ ಆ ಬಗ್ಗೆ ನೋಡೋಣ. ಕಾಂಗ್ರೆಸಿನಲ್ಲಿ ಕೆಲ ಸ್ವಯಂಘೋಷಿತ ನಾಯಕರಿದ್ದಾರೆ. ಅಂಥ ನಾಯಕರಿಂದಲೇ ಕಾಂಗ್ರೆಸ್ ಬೆಂಬಲಿಸುವ ಸಂಬಂಧ ವಿಚಾರ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಲಖನ್ ಪರೋಕ್ಷ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಕ್ರಮ ವಲಸಿಗರ ಕುರಿತು ತಿಂಗಳಲ್ಲಿ ಸಮೀಕ್ಷೆ ನಡೆಸಿ ವರದಿ ಪಡೆದು ಕ್ರಮ: ಆರಗ ಜ್ಞಾನೇಂದ್ರ
ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ್ ಜಾರಕಿಹೊಳಿಗೆ ಅವಕಾಶ ಸಿಗುತ್ತದೆಯೋ? ಇಲ್ಲವೋ? ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಜೆಪಿ ಸರ್ಕಾರ ರಚನೆಯಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಬಹಳಷ್ಟಿದೆ. 17 ಜನ ಶಾಸಕರು ಬರದೇ ಇದ್ದಿದ್ದರೆ ಬಿಜೆಪಿ ಸರ್ಕಾರ ರಚನೆ ಆಗುತ್ತಿರಲಿಲ್ಲ. ರಮೇಶ್ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ ಎಂದು ಹೇಳಿದರು.
ನಾನು ಜನರಿಗಾಗಿ, ಅವರ ಸೇವೆಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಕೆಲವರು ಪ್ರಚಾರಕ್ಕೆ ಮಾತ್ರ ಕೆಲಸವನ್ನು ಮಾಡುತ್ತಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯವಾಡಿದರು.