ಬೆಳಗಾವಿ: ರಾಜ್ಯದ ರೈತರ ಕೃಷಿ ಪಂಪ್ಸೆಟ್ಗಳಿಗೆ ಆಧಾರ್ ಲಿಂಕ್ ಮಾಡಲು ರೈತರು ಬಿಡುವುದಿಲ್ಲ. ಕೆಇಆರ್‌ಸಿ ಆದೇಶ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರದ್ದುಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಒತ್ತಾಯಿಸಿದರು. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 40 ಲಕ್ಷ ಕೃಷಿ ರೈತರು ಕೃಷಿ ಉತ್ಪನ್ನಗಳನ್ನು ಕಷ್ಟದಲ್ಲಿ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ ಎಂದರು.
ಇಂತಹ ಸಂದರ್ಭದಲ್ಲಿ ಆಧಾರ್ ಲಿಂಕ್ ಮಾಡಿದರೆ ಸಬ್ಸಿಡಿ ನೀಡುವುದಾಗಿ, ಇಲ್ಲವೇ ಉಚಿತ ವಿದ್ಯುತ್ ನಿಲ್ಲಿಸುತ್ತೇವೆ ಎಂದು ಕೆಇಆರ್‌ಸಿ ಆದೇಶ ಹೊರಡಿಸಿರುವುದು ಸರಿಯಲ್ಲ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಕೂಡಲೇ ಇದನ್ನು ವಾಪಸ್ ಪಡೆಯಬೇಕು, ಇಲ್ಲವೇ ಮುಖ್ಯಮಂತ್ರಿಗಳೇ ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ರಾಜ್ಯದ ರೈತ ಮುಖಂಡರು ಬೆಂಗಳೂರಿನ ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದೇವೆ ಎಂದರು.
ಮೇ. 24ರಂದು ನೂತನ ಮುಖ್ಯಮಂತ್ರಿಗಳನ್ನು ಬೆಂಗಳೂರು ವಿಧಾನಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಾಗಿದ್ದು, ರಾಜ್ಯದ ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಡಾ. ಸ್ವಾಮಿನಾಥನ್ ವರದಿಯಂತೆ ನಿಗದಿ ಮಾಡಿ ಶಾಸನಾತ್ಮಕ ಕಾನೂನು ಜಾರಿ ಮಾಡಬೇಕು. ಬೆಲೆ ಕುಸಿತವಾದಾಗ ಕೃಷಿ ಉತ್ಪನ್ನಗಳ ಖರೀದಿ ಖಾತರಿ ನೀಡಬೇಕು ಎಂದು ಕುರುಬೂರು ಶಾಂತಕುಮಾರ ತಿಳಿಸಿದರು.
2022 -23ರಲ್ಲಿ ಸಾಲಿನಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ 39 ದಿನಗಳು ಕಬ್ಬು ಬೆಳೆಗಾರ ರೈತರು ಸತತ ಹೋರಾಟ ಮಾಡಿದಾಗ, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಬೆಳಗಾವಿ ವಿಧಾನಸಭೆಯಲ್ಲಿ ಕಬ್ಬುದರ ಏರಿಕೆ ಮಾಡುವಂತೆ ಆಗ್ರಹಿಸಿದಾಗ ರಾಜ್ಯ ಸರ್ಕಾರ ಕಬ್ಬಿನ ಎಫ್ಆರ್ಪಿ ಹೆಚ್ಚುವರಿ ದರ ಟನ್ಗೆ 150 ರೂ ನಿಗದಿ ಮಾಡಿ ಆದೇಶ ಹೊರಡಿಸಿತ್ತು.
ಸಕ್ಕರೆ ಕಾರ್ಖಾನೆಗಳು ಈ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದನ್ನು ಉಚ್ಚ ನ್ಯಾಯಾಲಯದಲ್ಲಿ ಅಡ್ವಕೇಟ್ ಜನರಲ್ ಮೂಲಕ ಕೂಡಲೇ ತೆರವುಗೊಳಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗಾರ ರೈತರಿಗೆ ಸುಮಾರು 950 ಕೋಟಿ ಹಣ ಕೊಡಿಸಬೇಕು ಎಂದು ಆಗ್ರಹಿಸಿದರು. ರೈತರು ಕೃಷಿ ಸಾಲ ತೆಗೆದುಕೊಳ್ಳುವಾಗ ರೈತರ ಸಿಬಿಲ್ ಸ್ಕೋರ್ ಪರಿಶೀಲಿಸಿ ಸಾಲ ಕೊಡಬೇಕು ಎನ್ನುವ ನಿಯಮ ಜಾರಿಗೆ ಬಂದಿರುವ ಕಾರಣ, ಲಕ್ಷಾಂತರ ರೈತರು ಬ್ಯಾಂಕುಗಳಲ್ಲಿ ಸಾಲ ಸಿಗದೇ ಖಾಸಗಿ ಲೇವಾದೇವಿದಾರರಿಗೆ ದುಬಾರಿ ಬಡ್ಡಿ ನೀಡಿ ಸಾಲ ಪಡೆಯಬೇಕಾಗಿದೆ. ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಾಲವೂ ಸಿಗುತ್ತಿಲ್ಲ, ಆದ್ದರಿಂದ ಸಿಬಿಲ್ ಸ್ಕೋರ್ ಮಾನದಂಡ ರದ್ದು ಮಾಡಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿಗಳು ಹಣಕಾಸಿನ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿವೆ: ಹಿಂದಿನ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ಖಾಸಗಿ ಖರೀದಿದಾರರು ರೈತರ ಉತ್ಪನ್ನಗಳನ್ನು ಕಡಿಮೆ ದರ ಕೊಟ್ಟು ಖರೀದಿಸಿ ಮೋಸಗೊಳಿಸುತ್ತಿದ್ದಾರೆ. ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಇನ್ನು ಎಪಿಎಂಸಿಗಳು ಹಣಕಾಸಿನ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ತಾವು ಹಲವಾರು ಬಾರಿ, ನಾವು ಅಧಿಕಾರಕ್ಕೆ ಬಂದರೆ ತಿದ್ದುಪಡಿ ಕಾಯ್ದೆ ರದ್ದು ಮಾಡುತ್ತೇವೆ ಎಂದು ಬಹಿರ೦ಗವಾಗಿ ರಾಜ್ಯದ ರೈತರಿಗೆ ತಿಳಿಸಿದ್ದೀರಿ ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರಿಗೆ ಕುರುಬೂರು ಶಾಂತಕುಮಾರ ಮನವಿ ಮಾಡಿದರು.
ಹಣದ ಹೊಳೆ ಹರಿಸಿದರೂ ಚುನಾವಣೆಯಲ್ಲಿ ಕೆಲವೊಂದು ನಾಯಕರಿಗೆ ಗೆಲ್ಲಲು ಆಗಿಲ್ಲ. ಕರ್ನಾಟಕ ಮತದಾರರು ಪ್ರಬುದ್ಧರಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ಈಡೇರಿಸದಿದ್ದರೆ ನಾವು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಕುರುಬೂರು ಶಾಂತಕುಮಾರ, ಓರ್ವ ಮುಖ್ಯಮಂತ್ರಿಯಾಗಿ ಝಿರೋ ಟ್ರಾಫಿಕ್ ಬೇಡ, ಹಾರ ತುರಾಯಿ ಬೇಡ ಎನ್ನುವ ಮೂಲಕ ಎಲ್ಲರ ಮೆಚ್ಚುಗೆಗೆ ಸಿಎಂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಅದೇ ರೀತಿ ಎಲ್ಲರೂ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ರೈತ ಮುಖಂಡರಾದ ಎಸ್. ಬಿ. ಸಿದ್ನಾಳ, ಪರಶುರಾಮ ಎತ್ತಿನಗುಡ್ಡ, ರೇವಣಯ್ಯ ಹಿರೇಮಠ, ಹತ್ತಳ್ಳಿ ದೇವರಾಜ್, ಮಲ್ಲಪ್ಪ ಮನಿಹಾಳ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಬಳಸಿದ ಬಟ್ಟೆಗಳ ಮರುಬಳಕೆ ಪ್ರಯತ್ನ: ಮಂಗಳೂರಿನಲ್ಲಿ ವಿಶೇಷ ಅಭಿಯಾನ