ಚಿಕ್ಕೋಡಿ: ಕೆಎಸ್ಆರ್‌ಟಿಸಿಯಿಂದ ಸೆ. 22ರಿಂದ ಮಹಾರಾಷ್ಟ್ರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 80 ಬಸ್‌ಗಳು ಮಹಾರಾಷ್ಟ್ರಕ್ಕೆ ಕಾರ್ಯಾಚರಣೆ ಮಾಡಲಿವೆ ಎಂದು ಚಿಕ್ಕೋಡಿ ಕೆಎಸ್ಆರ್‌ಟಿಸಿ ನಿಯಂತ್ರಣಾಧಿಕಾರಿ ಶ್ರೀಧರ ಮರಿದೇವಮಠ ಹೇಳಿದರು.
ಚಿಕ್ಕೋಡಿ ಕೆಎಸ್ಆರ್‌ಟಿಸಿ ಕಚೇರಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಮುಂಚೆ ಚಿಕ್ಕೋಡಿ ಉಪ ವಿಭಾಗದಿಂದ 650 ಬಸ್‌ಗಳು ಸಂಚರಿಸುತ್ತಿದ್ದವು. ದಿನದಿಂದ ದಿನಕ್ಕೆ ಬಸ್ಗಳ ಸಂಚಾರ ಹೆಚ್ಚುಸುತ್ತಿದ್ದೇವೆ. ಸದ್ಯ 80 ಬಸ್‌ಗಳನ್ನು ಮಹಾರಾಷ್ಟ್ರಕ್ಕೆ ಬಿಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್‌ಗಳನ್ನು ಬಿಡುತ್ತೇವೆ ಎಂದರು.
ಸೆ. 22ರಿಂದ ಕೊಲ್ಲಾಪುರ, ಇಚಲಕರಂಜಿ, ಗಡಹಿಂಗ್ಲಜ, ಮಿರಜ, ಪುನಾ, ಸಾಂಗ್ಲಿ, ಮುಂಬೈವರೆಗೆ ಬಸ್ಗಳನ್ನ ಬಿಡುವುದಕ್ಕೆ ನಾವು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಮೊದಲು ಮಹಾರಾಷ್ಟ್ರಕ್ಕೆ 175 ಬಸ್‌ಗಳು ಸಂಚರಿಸುತ್ತಿದ್ದು, ಈಗ ಮೊದಲ ಹಂತದಲ್ಲಿ 80 ಬಸ್ ನೀಡುವ ಯೋಜನೆ ಮಾಡಿದ್ದೇವೆ. ಹಂತ ಹಂತವಾಗಿ ಜನ ಯಾವ ರೀತಿಯಾಗಿ ಪ್ರಯಾಣ ಮಾಡುತ್ತಾರೋ ಆ ಪ್ರಕಾರವಾಗಿ ಬಸ್ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಮೊದಲು ನಮಗೆ ಒಂದು ದಿನಕ್ಕೆ ಸಾರಿಗೆ ಆದಾಯ 60ರಿಂದ 65 ಲಕ್ಷ ಬರುತ್ತಿತ್ತು. ಇದೀಗ 30 ಲಕ್ಷ ಸಾರಿಗೆ ಆದಾಯ ಬರುತ್ತಿದೆ. ಮುಂದಿನ ವಾರದಲ್ಲಿ 40ರಿಂದ 45 ಲಕ್ಷಕ್ಕೆ ಹೆಚ್ಚಾಗಬಹುದು. ಯಾಕೆಂದರೆ ಚಿಕ್ಕೋಡಿ ಭಾಗದ ಜನ ಮಹಾರಾಷ್ಟ್ರದೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಪ್ರಯಾಣಿಕರು ಹೆಚ್ಚಾದರೆ ನಮಗೆ ಆದಾಯ ಹೆಚ್ಚಾಗುತ್ತದೆ ಎಂದರು.