ಚಿಕ್ಕೋಡಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪ್ರಣಾಳಿಕೆಯನ್ನು ಯಾರು ಒಪ್ಪಿಕೊಳ್ಳುತ್ತಾರೆ ಆ ಪಕ್ಷಕ್ಕೆ ನಾವು ಬೆಂಬಲವನ್ನು ನೀಡುತ್ತೇವೆ ಎಂದು ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಗಾಲಿ ಜನಾರ್ದನ್ ರೆಡ್ಡಿ ಹೇಳಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಬಸವರಾಜ ಬಿಸನಕೊಪ್ಪ ಪರವಾಗಿ ಪ್ರಚಾರ ಸಮಾರಂಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದರು.
‘‘ರಾಜ್ಯದಲ್ಲಿ ಬಹುಮತ ಯಾವುದೇ ಪಕ್ಷಕ್ಕೆ ಬರದಿದ್ದರೆ ನಮ್ಮ ಪಕ್ಷದ ಅನಿವಾರ್ಯ ಅವರಿಗೆ ಬಿದ್ದರೆ ನಮ್ಮ ಪಕ್ಷದ ಜನಪರ ಪ್ರಣಾಳಿಕೆಯನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಒಪ್ಪಿದರೆ ನಾವು ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದರು. ನಾನು ಸ್ವಂತ ಬಲದಿಂದ ಅಧಿಕಾರ ಮಾಡುವುದಕ್ಕೆ ಸಾಧ್ಯವಿಲ್ಲ, ರಾಜ್ಯದಲ್ಲಿ ನಾವು ಕನಿಷ್ಠ 25 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಕುಂದಿಸುವ ನಿಟ್ಟಿನಲ್ಲಿ ನಿಮ್ಮ ಪಕ್ಷ ನಿರ್ಮಾಣ ಆರೋಪ ವಿಚಾರ: ’’ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ನಮ್ಮ ಪಕ್ಷವನ್ನು ನಿರ್ಮಾಣ ಮಾಡಿಲ್ಲ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಅಥಣಿ , ಕುಡಚಿ ಯಾವ ಪಕ್ಷದ ಶಾಸಕರು ಇದ್ದಾರೆ ಎಂಬುದು ನಿಮಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು. ನಾವು ಸದ್ಯ ರಾಜ್ಯಾದ್ಯಂತ 35 ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ರಾಜ್ಯದಲ್ಲಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿಸಲು ಪೂರ್ವ ತಯಾರಿ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಕುಡಚಿ, ರಾಯಭಾಗ, ಅಥಣಿ, ಖಾನಾಪುರ ಇನ್ನೂ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಚುನಾವಣೆ ಕಣಕ್ಕೆ ಇಳಿಯುತ್ತಾರೆ. ಆ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ‘‘ ಎಂದು ರೆಡ್ಡಿ ಹೇಳಿದರು.
ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ: ಮುಂದೆ, ಜನಾರ್ದನ ರೆಡ್ಡಿ ಅವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ವಿಧಾನಸಭಾ ಕ್ಷೇತ್ರದ ಅವರ ಪಕ್ಷದ ಅಭ್ಯರ್ಥಿ ಶ್ರೀಶೈಲ ಭಜಂತ್ರಿ ಪರವಾಗಿ ಪ್ರಚಾರ ಸಮಾರಂಭದಲ್ಲಿ ಮಾತನಾಡಿ, ನನ್ನ ಬಗ್ಗೆ ನಮ್ಮ ರಾಜಕೀಯ ನಾಯಕರು ಅಪಪ್ರಚಾರ ಮಾಡಿದ್ದಾರೆ. ನನ್ನ ಜೊತೆಯಲ್ಲಿದ್ದ ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದರು. ಅವತ್ತಿನ ಸಂದರ್ಭ ಹಾಗಿತ್ತು. ಆದರೆ, ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಹೇಳಿದರು.
ಕರ್ನಾಟಕ ರಾಜಕೀಯದಲ್ಲಿ ಕಳೆದ 12-13 ವರ್ಷಗಳಲ್ಲಿ ಏನೆಲ್ಲ ಬೆಳವಣಿಗೆಗಳಾಗಿವೆ ಅನ್ನೋದು ನಿಮಗೆ ತಿಳಿದಿದೆ. ಸುಷ್ಮಾ ಸ್ವರಾಜ್ ಅವರು ನನಗೆ ರಾಜಕೀಯಕ್ಕೆ ಬರಬೇಕು ಎಂದು ಕೇಳಿಕೊಂಡಿದ್ದರು. ಇದರಿಂದ ನಾನು ರಾಜಕೀಯಕ್ಕೆ ಬಂದೆ. ಬೈ ಎಲೆಕ್ಷನ್‌ನಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್ ಸೋತಿದ್ದರೂ ಸಹ ಬಿಜೆಪಿ ಕರ್ನಾಟಕದಲ್ಲಿ ನೆಲೆಯೂರುವಂತಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಮುಂದೆ ಅವರು, ಬಿಜೆಪಿ ಪಕ್ಷ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ ಸಾಧ್ಯ ಆಗಿದ್ದು, ಗಾಲಿ ಜನಾರ್ದನ ರೆಡ್ಡಿ ಅವರ ಪರಿಶ್ರಮದಿಂದ ಎಂದು ನನ್ನ ಬೆನ್ನು ತಟ್ಟಿ ಹೇಳಿದ್ದರು. ಆದರೆ, ಇವತ್ತು ಆಗಿರುವುದೇ ಬೇರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದುವರೆದು, ನಾನು ಪ್ರವಾಸೋದ್ಯಮ ಸಚಿವನಾಗಿದ್ದ ವೇಳೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳ ಅವಶ್ಯಕತೆ ಇದೆ. ಕಳೆದ 12-13 ವರ್ಷಗಳಲ್ಲಿ ಯಾವೊಬ್ಬ ಸಿಎಂ ಸಹ ನೀರಾವರಿ ಯೋಜನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಕುಟುಕಿದರು. ಈಗಾಗಲೇ ಅನೇಕ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದೇನೆ.
ನನ್ನ ಶ್ರೀಮಂತಿಕೆ ನನ್ನ ಜನಪರ ಕೆಲಸಗಳನ್ನು ನೋಡಿ, ನನಗೆ ಮೀನಿನ ರೀತಿಯಲ್ಲಿ ಬಲೆಗೆ ಹಾಕಿದರು. ಕಳೆದ 2 ವರ್ಷಗಳಿಂದ ಬಳ್ಳಾರಿಗೆ ಹೋಗುತ್ತಿದ್ದೆ ಆರಾಮವಾಗಿ ಇದ್ದೆ. ಆದರೆ ಚುನಾವಣೆಗೆ ಮುನ್ನ ಮತ್ತೆ ನನ್ನ ಬಳ್ಳಾರಿಯಿಂದ ಹೊರ ಹಾಕುವ ಕೆಲಸ ಮಾಡಿದ್ದಾರೆ. ಮಣ್ಣು ಮಾರಿ ದೊಡ್ಡವನಾಗಿದ್ದೇನೆ, ಯಾರ ಜೇಬು ಲೂಟಿ ಮಾಡಿ ನಾನು ದೊಡ್ಡವನಾಗಿಲ್ಲ. ನನ್ನ ಜೈಲಿನಲ್ಲಿ ಇಟ್ಟು ಒಂದು ರೂಪಾಯಿ ಕೂಡ ನನ್ನಿಂದ ವಾಪಸ್ ತೆಗೆದುಕೊಳ್ಳಲು ಆಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಜೆಡಿಎಸ್ ತೊರೆದು ಮಾತೃಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ