ಬೆಳಗಾವಿ: ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಸಿದ್ದಪ್ಪ ಮದಿಹಳ್ಳಿ, ಬೆನಚಿನಮರಡಿ ಗ್ರಾಮದ ಸಿದ್ದಪ್ಪ ಕೊತ್ತಲ, ಮಾಲದಿನ್ನಿ ಗ್ರಾಮದ ರೇಣುಕಾ ಜವಾರಿ, ಸುನೀಲ ಭಂಗಿ, ಸಂತೋಷ ವೀರನಗಡ್ಡಿ, ಬಸವಣ್ಣಿ ಡೊಣವಾಡ, ಗದಗ ಮೂಲದ ಮಾರುತಿ ಸೋನವಣಿ, ಸಮೀತಕುಮಾರ್ ಸೋನವಣಿ ಹಾಗೂ ಅಮರೇಶ ರಾಜೂರ ಬಂಧಿತರು.
ಸ್ಮಾರ್ಟ್ ವಾಚ್ ಬಳಸಿ ಅಕ್ರಮ: ಆಗಸ್ಟ್ 7ರಂದು ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಗೋಕಾಕ್ನ ಜಿ.ಎಸ್.ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಿದ ಆರೋಪದಡಿ ಸಿದ್ದಪ್ಪ ಮದಿಹಳ್ಳಿ ಎಂಬ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಸಿದ್ದಪ್ಪ ಮದಿಹಳ್ಳಿ ಸ್ಮಾರ್ಟ್ ವಾಚ್ನಲ್ಲಿ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಂ ಆ್ಯಪ್ ಮೂಲಕ ಮತ್ತೊಬ್ಬ ಆರೋಪಿ ಸುನೀಲ್ ಭಂಗಿ ಎಂಬುವವರಿಗೆ ರವಾನಿಸಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿ ಗಮನಿಸಿ ಅನುಮಾನಗೊಂಡ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆಗಸ್ಟ್ 9ರಂದು ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬ್ಲೂ ಟೂತ್ನಲ್ಲಿ ಉತ್ತರ: ಬಳಿಕ ಪೊಲೀಸರು ಸಿದ್ದಪ್ಪ ಮದಿಹಳ್ಳಿಯನ್ನು ಬಂಧಿಸಿದ್ದರು. ಬಳಿಕ ತೀವ್ರ ವಿಚಾರಣೆ ನಡೆಸಿದಾಗ ಪ್ರಶ್ನೆ ಪತ್ರಿಕೆಯನ್ನು ಸುನೀಲ್ ಭಂಗಿ ಎಂಬುವವರಿಗೆ ಕಳುಹಿಸಿದ್ದ ಬಗ್ಗೆ ಪರೀಕ್ಷಾರ್ಥಿ ಬಾಯ್ಬಿಟ್ಟಿದ್ದನಂತೆ. ಈ ಮಾಹಿತಿ ಆಧರಿಸಿ ಹುಕ್ಕೇರಿ ತಾಲೂಕಿನ ಬಿ.ಕೆ.ಶಿರಹಟ್ಟಿ ಗ್ರಾಮದ ತೋಟದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುನೀಲ ಭಂಗಿ ಮನೆಯಲ್ಲಿ ಕುಳಿತು ಬ್ಲೂ ಟೂತ್ನಲ್ಲಿ ಹಲವರಿಗೆ ಉತ್ತರ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ.
ಗದಗ ನಗರಸಭೆ ಪಿ ಯು ಕಾಲೇಜಿನ ಕೇಂದ್ರದಿಂದಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಮಾಹಿತಿ ಲಭ್ಯವಾಗಿದೆ. ಆ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದ ಗದಗ ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನವಣಿ ಮತ್ತು ಇವರ ಮಗ ಸಮೀತಕುಮಾರ್ ಸೋನವಣಿ ಬಂಧಿಸಿ ಬೆಳಗಾವಿಗೆ ಕರೆತರಲಾಗಿದೆ. ಇವರಿಬ್ಬರೂ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಬ್ಲೂ ಟೂತ್ ಡಿವೈಸ್ ಮೂಲಕವೇ ಉತ್ತರ ಹೇಳಿದ ಆರೋಪವಿದೆ.
ಪ್ರಕರಣ ಬೆನ್ನತ್ತಿರುವ ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ್ ನೇತೃತ್ವದ ತಂಡ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿ ಪರೀಕ್ಷಾ ಪ್ರಾಧಿಕಾರಕ್ಕೆ ಸಮಗ್ರ ವರದಿ ಸಲ್ಲಿಸಲು ನಿರ್ಧರಿಸಿದೆ. ಅಭ್ಯರ್ಥಿಗಳು ಬ್ಲೂ ಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆದಿರುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಬೆಳಗಾವಿ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾಲ ಸಕ್ರಿಯವಾಗಿದೆ ಎಂಬ ಶಂಕೆಯ ಮೇರೆಗೆ ಪೊಲೀಸರು ಸದ್ಯ ತನಿಖೆಯನ್ನ ಮತ್ತಷ್ಟು ಚುರುಕಿಗೊಳಿಸಿದ್ದಾರೆ. ಕೆಪಿಟಿಸಿಎಲ್ ಪರೀಕ್ಷೆ ಅಕ್ರಮದಲ್ಲಿ 13 ಜನ ಅಭ್ಯರ್ಥಿಗಳು ಉತ್ತರ ಬರೆದಿರುವ ಮಾಹಿತಿ ಇದೆ. ಹೀಗಾಗಿ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಕೆಪಿಟಿಸಿಎಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಕೂಡ ಲೀಕ್? ಗದಗ ಕಾಲೇಜು ಉಪ ಪ್ರಾಚಾರ್ಯ, ಪುತ್ರನ ಬಂಧನ