ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಪ್ರಮುಖ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಪೊಲೀಸರು ಬಂಧಿಸಿದ್ದಾರೆ. ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಸೋಮನಗೌಡ ಪಾಟೀಲ ಬಂಧಿತ ಆರೋಪಿ. ಈ ಮೂಲಕ ನೇಮಕಾತಿ ಅಕ್ರಮದಲ್ಲಿ ಬಂಧಿತರ ಸಂಖ್ಯೆ 35ಕ್ಕೇರಿದೆ. ಗದಗಿನ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ರವಾನಿಸಿದ ಆರೋಪ ಕೇಳಿಬಂದಿದೆ.
ಗದಗ ಮುನ್ಸಿಪಲ್ ಪಿಯು ಕಾಲೇಜಿನ ಉಪಪ್ರಾಚಾರ್ಯ ಮಾರುತಿ ಸೋನವಣೆ ಪುತ್ರ ಸುಮಿತ್‌ಕುಮಾರ್‌ನನ್ನು ಈಗಾಗಲೇ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉಪ ಪ್ರಾಚಾರ್ಯ ಮಾರುತಿ ಪುತ್ರನ ಜೊತೆಗೆ ಡೀಲ್ ಕುದುರಿಸಿದ್ದ ಸೋಮನಗೌಡ ಅಭ್ಯರ್ಥಿಗಳಿಂದ 7.10 ಲಕ್ಷ ರೂ ಪಡೆದು ಅದರಲ್ಲಿ 4.50 ಲಕ್ಷ ರೂ. ಸುಮಿತ್‌ಕುಮಾರ್‌ಗೆ ನೀಡಿದ್ದ ಎಂದು ತಿಳಿದುಬಂದಿದೆ.
ಅದರಂತೆ, ಆ.7 ರಂದು ಸೋಮನಗೌಡ ವಾಟ್ಸಪ್‌ಗೆ ಸುಮಿತ್‌ಕುಮಾರ್ ಪ್ರಶ್ನೆ ಪತ್ರಿಕೆ ಕಳುಹಿಸಿದ್ದ. ಇದೇ ಕಾಪಿಯನ್ನು ಸೋಮನಗೌಡ ಉತ್ತರ ಹೇಳುವ ತಂಡಕ್ಕೆ ಕಳುಹಿಸಿ, ಅಲ್ಲಿಂದ ಅಭ್ಯರ್ಥಿಗಳಿಗೆ ಉತ್ತರ ಮುಟ್ಟಿಸಿದ್ದಾನೆ. ಸುಮಿತ್ಗೆ ಒಂದು ಸಿಮ್ ಕಾರ್ಡ್ ಹಾಗೂ ಅಭ್ಯರ್ಥಿಗೆ ಒಂದು ಎಲೆಕ್ಟ್ರಾನಿಕ್ ಡಿವೈಸ್ ಕೂಡಾ ಇದೇ ಆರೋಪಿ ಸಂದಾಯ ಮಾಡಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕೆಪಿಟಿಸಿಎಲ್ ಅಕ್ರಮ ಪ್ರಕರಣ: ಮತ್ತೋರ್ವ ಆರೋಪಿ ಬಂಧನ..!