ಬೆಳಗಾವಿ : ಸ್ವರ್ಗ ತೋರಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶವಾಸಿಗಳಿಗೆ ನರಕ ತೋರಿಸುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ನರೇಂದ್ರ ಮೋದಿ ಅವರಿಗೆ ಆಸ್ಕರ್ ಅವಾರ್ಡ್ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟೀಕಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ನಂತರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಸರ್ಕಾರದ ಆ ಹಣ ಎಲ್ಲಿಗೆ ಹೋಯ್ತು ಎಂಬುದೇ ಗೊತ್ತಿಲ್ಲ. ಪಿಎಂ ಕೇರ್ಸ್ ಫಂಡ್‌ನ ಸಾವಿರಾರು ಕೋಟಿ ಹಣದ ಬಗ್ಗೆಯೂ ಮಾಹಿತಿ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ. ಸುಳ್ಳು ಹೇಳುವ ಆಸ್ಕರ್ ವಾರ್ಡ್ ಇದ್ರೆ ಅದು ಪ್ರಧಾನಿ ಮೋದಿಗೆ ಸಲ್ಲುತ್ತೆ. ಕಳೆದ 7 ವರ್ಷಗಳಲ್ಲಿ ಜನರಿಗೆ ನರಕ ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ : ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ 3ನೇ ಅಲೆ ಆತಂಕದ ಮಧ್ಯೆ ಸರ್ಕಾರ ಮೈಮರೆಯುತ್ತಿದೆ. ಕೋವಿಡ್ ಮೊದಲನೇ ಅಲೆಯಲ್ಲಿ ಸಾವಿರಾರು ಜನರು ಸತ್ತರು. ಈ ವೇಳೆ ಎರಡು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿರುವ ಬಗ್ಗೆ ದಾಖಲೆ ಸಹಿತ ಆರೋಪ ಮಾಡಿದ್ದೆವು ಎಂದರು.
ಎರಡನೇ ಅಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹೀಗಿದ್ದರೂ ಆರೋಗ್ಯ ಸಚಿವರು ಕೇವಲ 37 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕೊರೊನಾ ಮೃತರ ಬಗ್ಗೆ ಸರ್ಕಾರ ಈವರೆಗೆ ನಿಖರ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಮನೆಯೊಂದು ಮೂರು ಬಾಗಿಲು : ಚಕ್ರವ್ಯೂಹದಲ್ಲಿ ಬಿಜೆಪಿ ನಾಯಕರು ಕೇವಲ ಸಿಎಂ ಬದಲಾಯಿಸಿದ್ದಾರೆ. ರಾಜ್ಯದಲ್ಲಿರುವ ಸರ್ಕಾರ ಕ್ರಿಯಾಶೀಲವಾಗಿಲ್ಲ. ಹೊಸ ಸಿಎಂ ಬಂದ್ರೂ ಸರ್ಕಾರ ಇನ್ನೂ ಟೇಕ್ಆಫ್ ಆದ ರೀತಿ ಕಾಣಿಸುತ್ತಿಲ್ಲ. ಬಸವರಾಜ ಬೊಮ್ಮಾಯಿ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ ಎಂದರು.
ಬಿಜೆಪಿ ಮನೆಯೊಂದು ಮೂರು ಬಾಗಿಲುಗಳಾಗಿವೆ. ಒಂದು ಧವಳಗಿರಿ ಬಿಎಸ್‌ವೈ ಮನೆ, ಎರಡನೆಯದ್ದು ಕೇಶವಕೃಪಾ, ಮೂರನೆಯದ್ದು ಬಿಜೆಪಿ ಹೈಕಮಾಂಡ್. ಈ ಚಕ್ರವ್ಯೂಹದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಿಲುಕಿದ್ದಾರೆ ಎಂದು ವ್ಯಂಗ್ಯವಾಡಿದರು.
ಆಪರೇಷನ್ ಹಸ್ತ : ರಾಜ್ಯದಲ್ಲಿ ಆಪರೇಷನ್ ಹಸ್ತ ಕುರಿತು ಬಿಎಸ್‌ವೈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ನಾವು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಸಾಕಷ್ಟು ಜನ ಬಿಜೆಪಿ, ಜೆಡಿಎಸ್‌ನವರು ನಮ್ಮ ನಾಯಕರ ಸಂಪರ್ಕದಲ್ಲಿರಬಹುದು. ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ. ಬೆಳಗಾವಿ ಬಿಜೆಪಿ ಶಾಸಕರು ನಮ್ಮ ನಾಯಕರ ಸಂಪರ್ಕದಲ್ಲಿ ಇರುವ ಬಗ್ಗೆ ಮಾಹಿತಿ ಇಲ್ಲ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದರು.
ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಕಾಂಗ್ರೆಸ್ ಸೇರ್ಪಡೆ ವಿಚಾರ : ರಾಜೀನಾಮೆ ನೀಡಿದ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಅವರು, ವಿಆರ್‌ಎಸ್ ಕೊಟ್ಟು ಆದಮೇಲೆ ಅವರು ಪಕ್ಷಕ್ಕೆ ಬಂದ್ರೆ ಸ್ವಾಗತಿಸುತ್ತೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವ ಮೆಚ್ಚಿ ಬಂದ್ರೆ ಸ್ವಾಗತ ಮಾಡ್ತೇವೆ. ಭಾಸ್ಕರ್‌ರಾವ್ ಇನ್ನೂ ಸೇವೆಯಿಂದ ಬಿಡುಗಡೆ ಆಗಿಲ್ಲ. ರಿಲೀವ್ ಆದ್ಮೇಲೆ ಪಕ್ಷ ಸೇರ್ಪಡೆಗೆ ಅರ್ಜಿ ಸಲ್ಲಿಸಲಿ. ಪಕ್ಷ ಸೇರ್ಪಡೆಗೆ ಅರ್ಜಿ ಸಲ್ಲಿಸಿದರೆ ಸ್ವಾಗತ ಮಾಡ್ತೇವೆ ಎಂದರು.