ಚಿಕ್ಕೋಡಿ (ಬೆಳಗಾವಿ): ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರನ್ನು ಶಾಸಕ ಸ್ಥಾನದಿಂದ ಉಚ್ಚಾಟಿಸುವಂತೆ ಕೋರಿ ಬೆಳಗಾವಿ ಕೊರಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ರಾಯಬಾಗ ತಾಲೂಕಿನಿಂದ ವರ್ಗಾವಣೆಯಾದ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರು, ಕೊರಮ ಸಮುದಾಯಕ್ಕೆ ಸೇರಿದವರಾಗಿದ್ದರು. ಅವರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ವಸತಿ ಗೃಹದಲ್ಲಿ ವಾಸವಾಗಿದ್ದರು. ಆದರೆ, ಸಮಾಜ ಕಲ್ಯಾಣಾಧಿಕಾರಿಗಳು ಶಾಸಕ ದುರ್ಯೋಧನ ಐಹೊಳೆ ಅವರ ಮಾತು ಕೇಳಿ, ಜುಲೈ 21ರ ರಾತ್ರಿ 11 ಗಂಟೆಗೆ ಬಂದು ತಹಶೀಲ್ದಾರ್ ಇದ್ದ ವಸತಿಗೃಹ ಖಾಲಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ, ಚಂದ್ರಕಾಂತ ಭಜಂತ್ರಿ ಅವರಿಗೆ ರಾಯಬಾಗ ಪಟ್ಟಣದಲ್ಲಿ ಯಾರೂ ಕೂಡ ಬಾಡಿಗೆ ಮನೆ ಕೊಡಬಾರದೆಂದು ಶಾಸಕರು ದರ್ಪ ತೋರಿಸಿದ್ದಾರೆ. ಕಳೆದ ತಿಂಗಳಿನಿಂದ ತಹಶೀಲ್ದಾರ್ಗೆ ನಾನಾ ಬಗೆಯಿಂದ ಕಿರುಕುಳ ನೀಡುತ್ತಿದ್ದಾರೆ. ಉದ್ದೇಶ ಪೂರ್ವಕವಾಗಿ ಸತ್ಯಕ್ಕೆ ದೂರವಿರುವ ಆರೋಪಗಳನ್ನು ಹೊರಸಿ, ವರ್ಗಾವಣೆಯನ್ನು ಮಾಡಿದ್ದಾರೆ ಎಂದು ದೂರಿದರು.
ಜನಪ್ರತಿನಿಧಿ ಹುದ್ದೆಯಲ್ಲಿರುವ ಶಾಸಕರು, ನಿಷ್ಠಾವಂತ ಅಧಿಕಾರಿಯಾದ ಚಂದ್ರಕಾಂತ್ ಇವರ ಮೇಲೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಮಾನವಿಯ ಮೌಲ್ಯಗಳನ್ನು ಕಗ್ಗೊಲೆ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಸುಮಾರು 5 ಲಕ್ಷ ಕೋರಮ ಸಮುದಾಯದವರಿಗೆ ತೋರಿದ ಅಗೌರವ ಇದಾಗಿದೆ. ಶಾಸಕರ ಇಂತಹ ಅಗೌರವ ವರ್ತನೆಯನ್ನು ಕೋರಮ ಸಮುದಾಯದವರು ಸಹಿಸಿಕೊಳ್ಳಲು ಆಗುವುದಿಲ್ಲವೆಂದು ಕೋರಮ ಸಮಾಜ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ರಾಮಜಿ ಭಜಂತ್ರಿ ಆರೋಪಿಸಿದ್ದಾರೆ.